ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶಿಕ್ಷಣದಲ್ಲಿ ರಂಗಭೂಮಿ ಮತ್ತದರ ಆಯಾಮಗಳ ಕುರಿತು ಮೂರು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಬಳಿ ಇರುವ ನಿರ್ದಿಗಂತದಲ್ಲಿ ಆರಂಭಗೊಂಡಿದೆ.ಮೊದಲನೇಯ ದಿನ ಶಿಕ್ಷಣದಲ್ಲಿ ರಂಗಭೂಮಿಯ ಅನುಸಂಧಾನ ವಿಚಾರ ಸಂಕಿರಣವನ್ನು ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ರಂಗಭೂಮಿಯ ಬಗ್ಗೆ ಮಾತನಾಡುವಾಗ ನಾವು ಯಾವ ವಯೋಮಾನದ ಮಕ್ಕಳನ್ನು ಗುರುತಿಸಬೇಕು. 5 ರಿಂದ 10 ವರ್ಷದವರೆಗಿರಬೇಕಾ ಅಥವಾ 18 ವರ್ಷದವರೆಗಿನವರನ್ನು ಒಳಗೊಳ್ಳಬೇಕಾ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಬೇಕು. ಅಲ್ಲಿಯೂ ಸಾಕಷ್ಟು ಸವಾಲುಗಳಿವೆ ಎಂದು ಹೇಳಿದರು.ಶಿಕ್ಷಣದಲ್ಲಿನ ರಂಗಭೂಮಿಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಂಡದ ಕೆಲಸ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ತರಗತಿಗಳಲ್ಲಿ ನಾಟಕ ಚಟುವಟಿಕೆಗಳು, ಆಟಗಳು ಮತ್ತು ತಂತ್ರಗಳ ಬಳಕೆಯನ್ನು ಒಳಗೊಂಡಿರುತ್ತದೆ. ಪರಸ್ಪರ ಸಹಾನುಭೂತಿ ಮತ್ತು ತಿಳಿವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುವವರು ಒಟ್ಟಾಗಿ ಕೆಲಸ ಮಾಡುವುದು ಮತ್ತು ಅವರ ಗುರಿಗಳನ್ನು ಸಾಧಿಸಲು ಪರಿಣಾಮಕಾರಿಯಾಗಿ ಸಂವಹನ ಮಾಡುವುದು ಅವಶ್ಯಕವಾಗಿದೆ ಎಂದು ನುಡಿದರು.
ರಂಗಭೂಮಿ ಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವನ್ನು ಹೇಗೆ ಬೆಳೆಸಬಹುದು. ಅವರ ಚಿಂತನೆ, ಆಲೋಚನೆ, ಕಲ್ಪನೆಗಳನ್ನು ಹೇಗೆ ಬೆಳೆಸಬಹುದು. ಶಿಕ್ಷಣದ ಜೊತೆಗೆ ರಂಗಭೂಮಿಯನ್ನು ಹೇಗೆ ಅನುಸಂಧಾನಗೊಳಿಸಬೇಕು. ರಂಗಭೂಮಿಯ ಸಾಧನಗಳನ್ನು ಶಿಕ್ಷಣದ ಭಾಗವಾಗಿಟ್ಟುಕೊಂಡು ಹೇಗೆಲ್ಲಾ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಚಿಂತನೆಗಳು, ಚರ್ಚೆಗಳು ನಡೆಯಬೇಕು ಎಂದು ಹೇಳಿದರು.ಶಿಕ್ಷಣದಲ್ಲಿ ನಾಟಕವು ವಿದ್ಯಾರ್ಥಿಗಳಿಗೆ ತಮ್ಮ ಭಾವನೆಗಳನ್ನು ನಿಭಾಯಿಸಲು, ಸಕಾರಾತ್ಮಕ ಸಂಬಂಧಗಳನ್ನು ಸ್ಥಾಪಿಸಲು ಮತ್ತು ಸಕಾರಾತ್ಮಕ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಒಂದು ಮಾರ್ಗವನ್ನು ಒದಗಿಸುತ್ತದೆ. ಶಿಕ್ಷಣದಲ್ಲಿ ನಾಟಕವು ಕೇವಲ ಪ್ರದರ್ಶನ ಕಲೆಗಳಿಗೆ ಸೀಮಿತವಾಗಿಲ್ಲ, ಇದು ಇತರೆ ವಿಷಯಗಳಲ್ಲಿ ಕಲಿಕೆಯನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಹುಡುಕಾಟದಲ್ಲಿದ್ದೇವೆ: ಪ್ರಕಾಶ್ ರಾಜ್ಇದಕ್ಕೆ ಪೂರಕವಾಗಿ ಆಶಯ ಭಾಷಣ ಮಾಡಿದ ನಟ ಹಾಗೂ ನಿರ್ದಿಗಂತ ಸಂಸ್ಥಾಪಕ ಪ್ರಕಾಶ್ ರಾಜ್ ಅವರು, ಶಿಕ್ಷಣದಲ್ಲಿ ರಂಗಭೂಮಿ ಹೇಗಿರಬೇಕು ಎಂಬ ಬಗ್ಗೆ ಒಟ್ಟಾರೆ ರೂಪುರೇಷೆ ಇನ್ನೂ ಆಗಿಲ್ಲ. ನಾವೂ ಕೂಡ ಅದರ ಹುಡುಕಾಟದಲ್ಲಿದ್ದೇವೆ. ಎಲ್ಲರೂ ಸೇರಿ ಒಟ್ಟಿಗೆ ಹುಡುಕಿದಾಗ ಇದಕ್ಕೊಂದು ನಿರ್ದಿಷ್ಟ ಮಾರ್ಗ ಸಿಗುತ್ತದೆ. ನಂತರ ಅವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಆಲೋಚಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಚಳವಳಿ ರಂಗಭೂಮಿ ವಿಷಯ ಕುರಿತು ಮುಂಬೈ ಡ್ರಾಮಾ ಸ್ಕೂಲ್ ಸಹ ಸಂಸ್ಥಾಪಕ ಜೆಹಾನ್ ಮಾಣಿಕ್ ಷಾ, ಶಾಲಾ ಕೊಠಡಿಗಳಲ್ಲಿ ರಂಗಭೂಮಿಯ ಸ್ವರೂಪ ಕುರಿತು ಕೊಚ್ಚಿ ಲೋಕಧರ್ಮಿ ಥಿಯೇಟರ್ ಕಲಾ ನಿರ್ದೇಶಕ ಡಾ.ಚಂದ್ರದಾಸನ್ ಹಾಗೂ ಇತರರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.