ಮಕ್ಕಳು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವ ಮೂಲಕ ಪೋಷಕರು ಮಕ್ಕಳ ಚೈತನ್ಯಕ್ಕೆ ಪೂರಕವಾಗಬೇಕು

ಯಲಬುರ್ಗಾ: ವಿಶೇಷಚೇತನರಿಗೆ ಆತ್ಮಸ್ಥೈರ್ಯ ತುಂಬುವುದು ಪ್ರಮುಖ ಚಿಕಿತ್ಸೆಯಾಗಿದೆ. ಇಂಥ ಮಕ್ಕಳನ್ನು ಸಮಾಜಮುಖಿಯಾಗಿಸುವುದು ಸಂತೃಪ್ತಿ ತರುತ್ತದೆ ಎಂದು ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅಲಿಂಕೋ ಸಂಸ್ಥೆ ಸಹಯೋಗದಲ್ಲಿ ತಾಲೂಕು ಮಟ್ಟದ ೨೦೨೫-೨೬ನೇ ಶೈಕ್ಷಣಿಕ ವರ್ಷದ ವಿಶೇಷಚೇತನ ಮಕ್ಕಳ ವೈದ್ಯಕೀಯ ತಪಾಸಣೆ ಹಾಗೂ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವ ಮೂಲಕ ಪೋಷಕರು ಮಕ್ಕಳ ಚೈತನ್ಯಕ್ಕೆ ಪೂರಕವಾಗಬೇಕು ಎಂದರು.

ಸಂಸ್ಥೆಯ ರವಿ ಗಂಜಿ ಮಾತನಾಡಿ, ವಿಶೇಷಚೇತನರು ಸರ್ಕಾರದಿಂದ ದೊರೆಯುವ ಸೌಲಭ್ಯ ಹಾಗೂ ಸಾಧನ ಸಲಕರಣೆ ಸದ್ಭಳಕೆ ಮಾಡಿಕೊಳ್ಳಬೇಕು. ಸೌಲಭ್ಯ ಪಡೆಯಲು ಯುಡಿಐಡಿ ಕಾರ್ಡ್ ಮಹತ್ವ ಕುರಿತು ವಿವರಿಸಿದರು. ಸಾಧನೆಗೆ ವಿಕಲತೆ ಅಡ್ಡಿಯಾಗದು ಎಂದರು.

೧ ರಿಂದ ೧೦ನೇ ತರಗತಿಯ ವಿಶೇಷಚೇತನ ಮಕ್ಕಳಿಗೆ ಆಯೋಜಿಸಿದ್ದ ಶಿಬಿರದಲ್ಲಿ ತಾಲೂಕಿನ ನಾನಾ ಶಾಲೆಯ ನೂರಾರು ಮಕ್ಕಳು ತಪಾಸಣೆಗೆ ಒಳಗಾದರು.

ಸರ್ಕಾರಿ ಆಸ್ಪತ್ರೆ ಮನೋವೈದ್ಯೆ ಡಾ. ಪುಷ್ಪಲತಾ ತೆರೆಸಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊಲೀಸ್ ಪಾಟೀಲ್, ಸಿದ್ದರೆಡ್ಡಿ, ಮುಖ್ಯಶಿಕ್ಷಕ ಸಿದ್ದಪ್ಪ ಕಟ್ಟಿ, ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈರಪ್ಪ ಕರೆಕುರಿ, ಪ್ರದೀಪ ಅಲಿಂಕೋ ಸಂಸ್ಥೆಯ ಪ್ರದೀಪ, ವಲಯ ಸಂಪನ್ಮೂಲ ವ್ಯಕ್ತಿ ರಾಜ್‌ಮಹ್ಮದ ಬಾಳೇಕಾಯಿ, ರಾಜಶೇಖರಯ್ಯ ಹಿರೇಮಠ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶಾವಮ್ಮ ಸೇರಿದಂತೆ ಮತ್ತಿತರರು ಇದ್ದರು.