ಸಾರಾಂಶ
ಬುದ್ಧ, ಬಸವ, ಗಾಂಧಿ ಅಲ್ಲದೆ ಸೂಫಿ, ಸಂತರ ಜೀವನ ನಮಗೆ ಮಾರ್ಗದರ್ಶನವಾಗಲಿ
ಹರಪನಹಳ್ಳಿ: ಆತ್ಮವಿಶ್ವಾಸವೇ ಶಿಕ್ಷಣದ ಮೊದಲ ಮೆಟ್ಟಿಲು, ಸೋಲನ್ನೇ ಮೆಟ್ಟಿಲು ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಸಾಹಿತಿ ಇಸ್ಮಾಯಿಲ್ ಯಲಿಗಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಂದೆ, ತಾಯಿಯ ಶ್ರಮದಾಯಕ ಬದುಕು, ಗುರುಗಳ ಪಾಠ ಬೋಧನೆ ನೆನಪಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು. ಸತತ ಪರಿಶ್ರಮ, ಬುದ್ಧಿವಂತಿಕೆ ಹಾಗೂ ಸೃಜನಶೀಲತೆಯಿಂದ ಓದು, ಬರವಣಿಗೆ ದಕ್ಕಿಸಿಕೊಂಡರೆ ನಿಜವಾದ ಫಲಿತಾಂಶ ದೊರೆಯುತ್ತದೆ ಎಂದರು.ಭಾರತದ ಸಾಧನೀಯ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ, ಕೆ.ಆರ್. ನಾರಾಯಣ್, ಅಮೇರಿಕ ಕಂಡ ಶ್ರೇಷ್ಠ ಅಧ್ಯಕ್ಷ ಅಬ್ರಹಾಂ ಲಿಂಕನ್, ಭಾರತದ ಪ್ರಧಾನಿ ಮನಮೋಹನ ಸಿಂಗ್ ಇವರೆಲ್ಲ ಓದಿದ್ದು ಸರ್ಕಾರಿ ಶಾಲೆಗಳಲ್ಲಿ, ಇವರೆಲ್ಲ ಸಾಧನೆಯ ಬದುಕು ಕಂಡವರು. ಸಂವಿಧಾನ ಕೊಟ್ಟ ಅಂಬೇಡ್ಕರ್ ಬದುಕು ನಮಗೆ ದಾರಿದೀಪವಾಗಬೇಕು. ಬುದ್ಧ, ಬಸವ, ಗಾಂಧಿ ಅಲ್ಲದೆ ಸೂಫಿ, ಸಂತರ ಜೀವನ ನಮಗೆ ಮಾರ್ಗದರ್ಶನವಾಗಲಿ. ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸ ಇರಲಿ. ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಸಾಧನೆಗೆ ಸತತ ಪರಿಶ್ರಮವೇ ಕಾರಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಢ ಶಾಲೆಯ ಮುಖ್ಯಶಿಕ್ಷಕಿ ಮಮತಾಜ್, ಶಿಕ್ಷಕರಾದ ಜಯಮಾಲತೇಶ್, ಲತಾ ರಾತೋಡ್, ಪಂಪ ನಾಯ್ಕ್, ವಿಶ್ವನಾಥ್, ಶಭಾನ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.