ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಜೀವನದ ಉನ್ನತಿಗೆ ಸಂಸ್ಕಾರ-ಸನ್ಮಾರ್ಗ ದರ್ಶನದ ಅವಶ್ಯಕತೆಯಿದೆ. ಆತ್ಮ ಸಂಯಮ ಆಧ್ಯಾತ್ಮ ಜ್ಞಾನದ ಅಡಿಪಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರು ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಜೀವನದ ಉನ್ನತಿಗೆ ಸಂಸ್ಕಾರ-ಸನ್ಮಾರ್ಗ ದರ್ಶನದ ಅವಶ್ಯಕತೆಯಿದೆ. ಆತ್ಮ ಸಂಯಮ ಆಧ್ಯಾತ್ಮ ಜ್ಞಾನದ ಅಡಿಪಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಮಂಗಳವಾರ ಸಂಜೆ ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನಿಂದ ಸಂಘಟಿಸಿದ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ 2ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭೂಮಿಯಲ್ಲಿ ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಮತ್ತು ರಕ್ಷಣೆ ಎಷ್ಟು ಅವಶ್ಯಕವೋ ಹಾಗೆಯೇ ನೀತಿಗೆ ಧರ್ಮವು ಅಷ್ಟೇ ಅವಶ್ಯಕವಾಗಿದೆ. ಸಾತ್ವಿಕ ಮತ್ತು ತಾತ್ವಿಕ ಹಿತ ಚಿಂತನೆಗಳನ್ನು ಬೋಧಿಸುವುದೇ ಗುರುವಿನ ಧರ್ಮ. ನಡೆದಾಡುವ ದಾರಿಯಲ್ಲಿ ಬಿದ್ದ ಕಲ್ಲು ಮುಳ್ಳುಗಳನ್ನು ಎತ್ತಿ ಹಾಕುವುದೇ ನಿಜವಾದ ಧರ್ಮ. ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಿಸಿಕೊಳ್ಳುವ ಧರ್ಮ ಪ್ರಜ್ಞೆ ಮತ್ತು ಆಚರಣೆ ಮುಖ್ಯ. ಮೌಲ್ಯಗಳು ಕಣ್ಮರೆಯಾಗುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ಮತ್ತೆ ಅವುಗಳನ್ನು ಉಳಿಸಿ ಬೆಳೆಸುತ್ತ ಎಲ್ಲರೂ ಶ್ರಮಿಸುವ ಅವಶ್ಯಕತೆಯಿದೆ ಎಂದರು. ಧರ್ಮ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ವಿಷಯವಾಗಿ ಬೆಂಗಳೂರಿನ ಎಸ್.ಜೆ.ಆರ್.ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮಾ ಸಿದ್ಧರಾಜು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯುನ್ನತ ಗೌರವ ಸ್ಥಾನವನ್ನು ಕೊಟ್ಟಿದ್ದಾರೆ. ಈ ನಾಡಿನ ಸಂಸ್ಕತಿ ಸಭ್ಯತೆ ಮತ್ತು ಆದರ್ಶಗಳನ್ನು ಉಳಿಸಿ ಬೆಳೆಸಿಕೊಂಡು ಬಂದ ಜವಾಬ್ದಾರಿ ಮಹಿಳೆಯರ ಮೇಲಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶರಣರು ವಿಶೇಷ ಧರ್ಮಾಚರಣೆಯನ್ನು ಕೊಟ್ಟಿರುವುದನ್ನು ಮರೆಯಲಾಗದು ಎಂದರು.ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮಿಗಳು ಮಾತನಾಡಿ , ಬಾಲ್ಯದಲ್ಲಿ ಜ್ಞಾನ ತಾರುಣ್ಯದಲ್ಲಿ ಸಂಪತ್ತು ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬದುಕಬೇಕಾಗಿದೆ. ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ಸಹನೆ ದಯೆ ವೃದ್ಧಿಗೊಳ್ಳುತ್ತವೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಧನುರ್ಮಾಸದ ಜ್ಞಾನ ಯಜ್ಞದಿಂದ ಭಕ್ತರ ಬಾಳಿಗೆ ಬೆಳಕು ಮೂಡಿ ಬರುವುದು ಎಂದು ತಿಳಿಸಿದರು. ಹೊಳವನಹಳ್ಳಿ ಮಠದ ನಂಜುಂಡೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಮ್ಮುಖವಹಿಸಿದ್ದರು. ಇದೇ ಸಂದರ್ಭದಲ್ಲಿ ರಂಭಾಪುರಿ ಬೆಳಗು ಮಾಸಿಕವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕ ಎನ್.ನಂಜುಂಡೇಶ ಬಿಡುಗಡೆ ಮಾಡಿ ಮಾತನಾಡಿದರು.
ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್, ಬಿ.ಎಸ್.ಮಂಜುನಾಥ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಕೆ.ಎಸ್.ಮಂಜುನಾಥ್, ಮೈತ್ರಿ ಮಹಿಳಾ ಅಧ್ಯಕ್ಷೆ ಶೈಲಾ ಶಿವಕುಮಾರ್, ಮೋಹನ್‌ಕುಮಾರ್ ಪಟೇಲ್, ಡಾ.ದರ್ಶನ್ ಕೆ.ಎಲ್, ಟಿ.ಎಸ್.ಸಿದ್ಧಗಂಗಾ ರುದ್ರೇಶ್, ಕವಿತಾ, ಕೆ.ಎನ್.ಗಂಗಣ್ಣ, ಎಚ್.ಬಿ.ಎಂ.ಹಿರೇಮಠ ಅವರಿಗೆ ಜಗದ್ಗುರುಗಳು ಗುರುರಕ್ಷೆ ನೀಡಿದರು.ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ಉಪಾಧ್ಯಕ್ಷ ಕೆ.ಎಸ್.ಉಮೇಶ್ ಕುಮಾರ್, ಖಜಾಂಚಿ ಟಿ.ಎಸ್.ಕರುಣಾರಾಧ್ಯ, ಡಿ.ಆರ್.ಸತೀಶ್ ಮೊದಲಾದವರು ಭಾಗವಹಿಸಿದ್ದರು.