ಸಾರಾಂಶ
ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಬಂದೂಕು ತರಬೇತಿ ಶಿಬಿರದ ಸಮಾರೋಪ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆತ್ಮ ರಕ್ಷಣೆಗಾಗಿ ಪಡೆದುಕೊಂಡ ಬಂದೂಕುಗಳನ್ನು ವನ್ಯಜೀವಿಗಳ ಹತ್ಯೆ ಮಾಡುವುದಕ್ಕೆ ಬಳಸುವುದು ಕಾನೂನಿನ ಅನ್ವಯ ಅಪರಾಧ ಎಂದು ಚಿಕ್ಕಮಗಳೂರು ಡಿಎಫ್‌ಓ ರಮೇಶ್ ಬಾಬು ಹೇಳಿದರು.ನಗರದ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬಂದೂಕುಗಳನ್ನು ದುರುಪಯೋಗಪಡಿಸಿಕೊಂಡರೆ ಅವರ ವಿರುದ್ಧ ಪೊಲೀಸ್ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ದೊಡ್ಡ ಜಿಲ್ಲೆಯಾಗಿ, ಪ್ರಾಕೃತಿಕವಾಗಿಯೂ ಸಂಪದ್ಭರಿತ ಜಿಲ್ಲೆಯಾಗಿದ್ದು, ಇಲ್ಲಿನ ಕೃಷಿಕರಿಗೆ ಜೀವ ಮತ್ತು ಬೆಳೆ ರಕ್ಷಿಸಿಕೊಳ್ಳಲು ಬಂದೂಕುಗಳು ಅತ್ಯವಶ್ಯಕ. ಮಲೆನಾಡಿಗರು ಬಂದೂಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಬಂದೂಕು ಎಂಬುದು ಹೆಮ್ಮೆಯ ಪ್ರತೀಕವೂ ಹೌದು ಎಂದು ಹೇಳಿದರು.ಮಲೆನಾಡಿನ ದುರ್ಗಮ ಪ್ರದೇಶಗಳ ತೋಟಗಳಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ಕೃಷಿಕ ಮಾಲೀಕರಿಗೆ ಬಂದೂಕು ಆತ್ಮವಿಶ್ವಾಸ ಮೂಡಿಸುವುದರೊಂದಿಗೆ ತುರ್ತು ಸಂದರ್ಭದಲ್ಲಿ ಆಪದ್ಬಾಂಧವನಾಗಿ ರಕ್ಷಣೆ ನೀಡುತ್ತದೆ ಎಂದು ಹೇಳಿದ ಅವರು, ಇಂತಹ ಬಂದೂಕು ತರಬೇತಿ ಶಿಬಿರಗಳು ಬಂದೂಕು ಬಳಕೆ ಕೌಶಲ ಕಲಿಸುತ್ತವೆ. ಕೆಲವು ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಕಾನೂನಾತ್ಮಕ ಕ್ರಮಗಳು ಬಗ್ಗೆ ಅರಿವು ಮೂಡಿಸಲು ಸಹಕಾರಿ ಎಂದರು.
ಬಂದೂಕು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆ ಹೊಂದಿರಬಾರದು ಎಂಬ ಪ್ರಮುಖ ಷರತ್ತು ವಿಧಿಸಿದ್ದು, ಬಂದೂಕು ಪಡೆಯಲು ಇಚ್ಛಿಸುವವರು ಬಹು ಎಚ್ಚರಿಕೆಯಿಂದ ಹಾಗೂ ಸಂಯಮದಿಂದ ವರ್ತಿಸುವ ಅವಶ್ಯಕತೆ ಇದೆ ಎಂದು ಹೇಳಿದರು.ಜಿಲ್ಲೆಯಲ್ಲಿ ದಾಖಲಾಗಿರುವ ವನ್ಯಜೀವಿ ಕಳ್ಳ ಬೇಟೆ 180 ಪ್ರಕರಣಗಳ ಪೈಕಿ ನೂರಕ್ಕೂ ಹೆಚ್ಚು ಪರವಾನಗಿ ಪಡೆದ ಬಂದೂಕುಗಳನ್ನು ಉಪಯೋಗಿಸಿರುವುದು ದುರಾದೃಷ್ಟಕರ ಎಂದು ವಿಷಾಧಿಸಿದ ಅವರು, ಜಿಲ್ಲೆಯಲ್ಲಿ ವಿದ್ಯಾವಂತರು, ಕಾನೂನಿಗೆ ಬೆಲೆ ಕೊಡುವ ಸುಸಂಸ್ಕೃತ ಜನರಿದ್ದು ಆ ಪೈಕಿ ಕೆಲವೇ ಮಂದಿಯ ದುರ್ವರ್ತನೆ ಅವರು ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಹೇಳಿದರು.
ಕಳೆದ 7-8 ವರ್ಷಗಳಲ್ಲಿ ವನ್ಯಜೀವಿಗಳಿಂದ ಬೆಳೆ ಹಾನಿಯೂ ಸೇರಿದಂತೆ ಉತ್ಪನ್ನಗಳು ನಷ್ಟವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಯಿಂದ ₹12 ಕೋಟಿ ಪರಿಹಾರ ನೀಡಲಾಗಿದೆ. 2024-25 ನೇ ಸಾಲಿನಲ್ಲಿ ವನ್ಯ ಜೀವಿಗಳಿಂದ ₹4.5 ಕೋಟಿ ನಷ್ಟವಾಗಿರುವ ಬಗ್ಗೆ ಅರ್ಜಿಗಳು ಬಂದಿದ್ದು ಇದನ್ನು ಇಲಾಖೆ ಮಟ್ಟದಲ್ಲಿ ಚರ್ಚಿಸಿ ಅವರಿಗೆ ಇಲಾಖೆಯಿಂದ ತಲುಪಿಸಬೇಕಾದ ಪರಿಹಾರ ತಲುಪಿಸಲು ಪ್ರಾಮಾಣಿಕವಾಗಿ ಇಲಾಖೆ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ನಾಗರಿಕರ ನಡುವಿನ ಅಂತರ ಕಡಿಮೆ ಮಾಡುವುದೇ ಈ ಬಂದೂಕು ತರಬೇತಿ ಮೂಲ ಉದ್ದೇಶ ಎಂದು ಹೇಳಿದರು.
ನಾಗರಿಕರಿಗೆ ಬಂದೂಕು ತರಬೇತಿ ನೀಡುವುದು ಅದರೊಂದಿಗೆ ಪರವಾನಗಿ ನೀಡುವುದು ಪೊಲೀಸ್ ಇಲಾಖೆ ಆದ್ಯ ಕರ್ತವ್ಯ ಎಂದ ಅವರು, ಪೋಲಿಸ್ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತನೆಗೊಳಿಸಲು ನಾಗರಿಕರ ಸಹಕಾರ ಅತ್ಯಗತ್ಯ ಎಂದರು.ಶಿಬಿರಾರ್ಥಿಯಾಗಿ ಭಾಗವಹಿಸಿದ ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ ಮಾತನಾಡಿ, ತರಬೇತಿ ಪಡೆದು ಖರೀದಿಸಿದ ಬಂದೂಕುಗಳಿಂದ ಪ್ರಾಣಿಗಳ ಬೇಟೆ ಮಾಡುವುದು ಮಾನವೀಯತೆ ಲಕ್ಷಣವಲ್ಲ. ವನ್ಯಜೀವಿಗಳು ನಮ್ಮ ಪರಿಸರದ ಒಂದು ಭಾಗ, ಅವುಗಳಿಗೂ ಭಾವನೆಗಳಿದ್ದು ಪ್ರಾಣಿಗಳ ಭಾವನೆ ಅರಿತು ಮನುಷ್ಯ ವರ್ತಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೌಲ್ಯಮಾಪನ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್, ಚಿಕ್ಕಮಗಲೂರು ಡಿ.ವೈ.ಎಸ್.ಪಿ. ಶೈಲೇಂದ್ರ, ಆರ್.ಪಿ.ಐ.ಸಹದೇವ್ ಇದ್ದರು. ವಕೀಲ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. 4 ಕೆಸಿಕೆಎಂ 1ಚಿಕ್ಕಮಗಳೂರಿನ ಸಶಸ್ತ್ರ ಮೀಸಲು ಪಡೆಯ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಡಿಎಫ್‌ಓ ರಮೇಶ್‌ಬಾಬು ಅವರು ಉದ್ಘಾಟಿಸಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಎ.ಎನ್. ಮಹೇಶ್, ಸುಜೇಂದ್ರ ಇದ್ದರು.