ಸಾರಾಂಶ
- ಕಡ್ಲೆಬಾಳು ಮಹಾಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜಿಪಂಗೆ ಸೂಚನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸರ್ಕಾರಿ ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾಗುವ ಆಹಾರ ಪದಾರ್ಥಗಳನ್ನು ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಂದ ಪಡೆಯುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜಿಲ್ಲಾ ಪಂಚಾಯತ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು. ತಾಲೂಕಿನ ಕಡ್ಲೇಬಾಳು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಹೊಂಬೆಳಕು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಮಿತಿ ಮಹಾಸಭೆ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಮಹಿಳೆಯರೊಂದಿಗೆ ಸಂವಾದ ಹಾಗೂ ಕುಂದು ಕೊರತೆಗಳ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಸರ್ಕಾರಿ ಹಾಸ್ಟೆಲ್, ಅಂಗನವಾಡಿಗಳಿಗೆ ಸ್ವಸಹಾಯ ಗುಂಪುಗಳಿಂದಲೇ ಇನ್ನು ಆಹಾರ ಪೂರೈಸಬೇಕು. ಅಂಗನವಾಡಿಗಳಲ್ಲಿ ಕಾರ್ಯಕರ್ತೆ, ಸಹಾಯಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಗರ್ಭಿಣಿಯರಿಗೆ ತಾಯಿ ಸ್ಥಾನ ತುಂಬುತ್ತೀರಿ. ಅಂತಹವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಬೇಕು. ಸರಿಯಾದ ವೇಳೆಗೆ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿ, ಸಾವಿನ ಪ್ರಮಾಣ ಕಡಿಮೆ ಮಾಡಬೇಕು. ಸ್ವಸಹಾಯ ಸಂಘಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಇದರಿಂದ ಆರ್ಥಿಕ ಸಬಲಕೆಯಿಂದ ಶೋಷಣೆ ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ತಿಳಿಸಿದರು.ಕಡ್ಲೇಬಾಳು ಗ್ರಾಮಸ್ಥರು ಸರ್ಕಾರದ ಸೌಲಭ್ಯಗಳನ್ನು ಇನ್ನೂ ಹೆಚ್ಚಿನದಾಗಿ ಪಡೆಯಬೇಕು. ರಸ್ತೆ, ದೀಪ, ನೈರ್ಮಲ್ಯ, ನೀರಿನ ವ್ಯವಸ್ಥೆ ಇತರೆ ಸ್ಥಾಪನೆ, ನಿರ್ವಹಣೆಗಳು, ಕಡ್ಡಾಯವಾದ ಕರ್ತವ್ಯಗಳು, ಆದಾಯ ಹೆಚ್ಚಿಸುವಂತಹ ಕೆರೆ ಬಾವಿಗಳ ನಿರ್ಮಾಣ, ಅರಣ್ಯ ಬೆಳವಣಿಗೆ ಮತ್ತಿತರೆ ಕಾರ್ಯಕ್ರಮಗಳನ್ನು ಶಿಕ್ಷಣ, ವಸತಿ, ವಾಚನಾಲಯ, ಕ್ರೀಡಾಂಗಣ, ತೋಟಗಳು ಇತರೆ ಸೌಕರ್ಯ ಒದಗಿಸುವಂತಹ ಯೋಜನೆಗಳನ್ನೂ ಗ್ರಾಪಂಗಳು ಕೈಗೊಳ್ಳಬಹುದು ಎಂದು ಹೇಳಿದರು.
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇದರ ಉದ್ದೇಶ ಬಡತನ ನಿರ್ಮೂಲನೆ ಮಾಡುವಂತಹದ್ದಾಗಿದೆ. ಗ್ರಾಮೀಣ ಮಹಿಳೆಯರ ಜೀವನ ಸುಧಾರಣೆ ಆಗಬೇಕು. ಶಿಕ್ಷಣ, ಆರ್ಥಿಕ ಸೌಲಭ್ಯ ಹೆಚ್ಚಿನ ಮಟ್ಟದಲ್ಲಿ ನೀಡಬೇಕಾಗಿದೆ. ಸ್ತ್ರೀಶಕ್ತಿ ಯೋಜನೆ ಸ್ಥಾಪನೆಯಾಗಿ 10 ವರ್ಷವಾಗಿದೆ. ಕಡ್ಲೆಬಾಳು ಗ್ರಾಪಂ ವ್ಯಾಪ್ತಿಯಲ್ಲಿ 80 ಸ್ವಸಹಾಯ ಸಂಘ, 802 ಅಭ್ಯರ್ಥಿಗಳು ಜಿಎಫ್‌ಎಲ್ ಸೇರಿಕೊಂಡಿದ್ದಾರೆ ಎಂದರು.ನಮ್ಮ ಜಿಲ್ಲೆಯಲ್ಲಿ 3.80 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುತ್ತಿದ್ದಾರೆ. 2 ಲಕ್ಷ ಜನರು ಎನ್ಆರ್‌ಎಲ್‌ಎಂ ವ್ಯಾಪ್ತಿ ಬಿಟ್ಟು, ಹೊರಗಿದ್ದಾರೆ. ಅಂತಹವರನ್ನೂ ಈ ವ್ಯಾಪ್ತಿಗೆ ಆದಷ್ಟು ಬೇಗನೆ ತರಬೇಕು. 66 ಸ್ವಸಹಾಯ ಸಂಘಗಳಿಗೆ ಸುಮಾರು ₹36 ಲಕ್ಷಗಳನ್ನು ನೀಡಿದ್ದೇವೆ. ಕಡ್ಲೇಬಾಳು ಗ್ರಾಮದ ಸ್ವಸಹಾಯ ಸಂಘದವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಭರಮಕ್ಕ ಪರಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯವರು ಪ್ರಗತಿ ವರದಿ ನೀಡಿದರು. ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರೆವೇರಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ಹಣ್ಣು ಮತ್ತು ತರಕಾರಿ ಬೀಜಗಳನ್ನು ವಿತರಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಗ್ರಾಪಂ ಉಪಾಧ್ಯಕ್ಷ ಪ್ರಭಾಕರ ಕಡ್ಲೇಬಾಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೆ.ಪರಶುರಾಮ ಮಾಗಾನಹಳ್ಳಿ, ತಹಸೀಲ್ದಾರ್ ಡಾ.ಅಶ್ವತ್ಥ್, ತಾಪಂ ಇಒ ರಾಮ ಭೋವಿ, ಕೃಷಿ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿ.ಎಸ್.ಅಭಿಕುಮಾರ, ಹೊಂಬೆಳಕು ಗ್ರಾಪಂ ಮಟ್ಟದ ಒಕ್ಕೂಟದ ಪದಾಧಿಕಾರಿ ಬಿ.ಎಂ. ಮಂಜುಳಾ ಸೇರಿದಂತೆ ಗ್ರಾಮಸ್ಥರು ಇದ್ದರು.
- - --28ಕೆಡಿವಿಜಿ11:
ಕಡ್ಲೇಬಾಳು ಗ್ರಾಮದಲ್ಲಿ ಬಾಣಂತಿಯರಿಗೆ ನಡೆದ ಸೀಮಂತ ಕಾರ್ಯದಲ್ಲಿ ಸಂಸದೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪಾಲ್ಗೊಂಡರು. ವಿವಿಧ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಇದ್ದರು.