ಬ್ರಹ್ಮಾವರ: ಇಲ್ಲಿನ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಯ ಆಶ್ರಯದಲ್ಲಿ ಅಣಬೆ ಬೇಸಾಯ ಮತ್ತು ಬ್ಯೂಟಿ ಪಾರ್ಲರ್ ತರಬೇತಿ ಕಾರ್ಯಕ್ರಮವನ್ನು ಜಿಪಂ ಯೋಜನಾ ನಿರ್ದೇಶಕ ಡಾ. ಉದಯ್ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗ್ರಾಮೀಣ ಯುವಜನತೆಗೆ ಸ್ವಉದ್ಯೋಗ ಆರಂಭಿಸಲು ಉಚಿತ ತರಬೇತಿ, ಊಟ ಮತ್ತು ವಸತಿಯೊಂದಿಗೆ ಯುವಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ರುಡ್‌ಸೆಟ್ ಮಹತ್ವದ ವೇದಿಕೆಯನ್ನು ಒದಗಿಸುತ್ತಿರುವುದನ್ನು ಶ್ಲಾಘಿಸಿದರು. ಚಿಂತನೆ ಮತ್ತು ದೂರದೃಷ್ಟಿಯ ಪಕ್ವತೆ ಇದ್ದರೆ ಯಾವುದೇ ವ್ಯವಹಾರದಲ್ಲಿ ಯಶಸ್ಸು ಸಾಧಿಸಬಹುದು. ಹೊಸತನದ ಆಲೋಚನೆಗಳು ನಮ್ಮನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾದ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಜಿ ಅವರು ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ತರಬೇತಿ ನಂತರ ಬ್ಯಾಂಕಿನ ಮೂಲಕ ಹಣಕಾಸಿನ ನೆರವು ಪಡೆದು ಸ್ವ ಉದ್ಯೋಗ ಆರಂಭಿಸಬೇಕು ಎಂದು ಸಲಹೆ ನೀಡಿದರು. ಬ್ಯಾಂಕಿಂಗ್ ಸಂಬಂಧಿತ ಸಮಸ್ಯೆಗಳು ಎದುರಾದಲ್ಲಿ ತಮ್ಮ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಅವರು, ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು, ಸಂಸ್ಥೆಯ ಸೌಲಭ್ಯಗಳನ್ನು ಇತರರಿಗೂ ಹಂಚಿಕೊಳ್ಳುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಚೈತ್ರ ಕೆ. ನಿರೂಪಿಸಿದರು. ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.