ಮಹಿಳೆಯರು ಸ್ವಸಹಾಯ ಸಂಘಗಳ ಮುಖಾಂತರ ಬ್ಯಾಂಕುಗಳು ಹಾಗೂ ಎನ್‌ಜಿಒ ಸಹಯೋಗದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ ತುಂಬಾ ಆಸಕ್ತಿ ವಹಿಸಿದ್ದು ಮಹಿಳೆಯರು ತಮ್ಮ ನೆರೆಹೊರೆಯ, ಸಂಬಂಧಿಕರ, ಕುಟುಂಬದ ಎಲ್ಲ ಸದಸ್ಯರನ್ನು ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಮಹಿಳಾ ಸಬಲೀಕರಣಕ್ಕಾಗಿ ರಚಿತವಾದ ಸ್ವಸಹಾಯ ಸಂಘಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಊಹಿಸಲಾರದಷ್ಟು ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ಮತ್ತಿಘಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಮಂಜುನಾಥ ತಿಳಿಸಿದರು.

ಮತ್ತಿಘಟ್ಟ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತಿಘಟ್ಟ ಶಾಖೆಯಿಂದ ಏರ್ಪಡಿಸಿದ್ದ ಮಹಿಳಾ ಸಂಘಗಳಿಗೆ ಸಾಲ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್‌.ಎಂ.ಕುಮಾರಸ್ವಾಮಿ ಮಾತನಾಡಿ, ಮಹಿಳೆಯರು ಸ್ವಸಹಾಯ ಸಂಘಗಳ ಮುಖಾಂತರ ಬ್ಯಾಂಕುಗಳು ಹಾಗೂ ಎನ್‌ಜಿಒ ಸಹಯೋಗದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ ತುಂಬಾ ಆಸಕ್ತಿ ವಹಿಸಿದ್ದು ಮಹಿಳೆಯರು ತಮ್ಮ ನೆರೆಹೊರೆಯ, ಸಂಬಂಧಿಕರ, ಕುಟುಂಬದ ಎಲ್ಲ ಸದಸ್ಯರನ್ನು ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಮತ್ತಿಘಟ್ಟ ಗ್ರಾಮ ಪಂಚಾಯಿತಿಯ ಗ್ರಂಥಪಾಲಕರಾದ ಷಡಕ್ಷರಿ ಮಾತನಾಡುತ್ತಾ, ಮೊಬೈಲಿಗಿಂತ ಪತ್ರಿಕೆ ಹಾಗೂ ಪುಸ್ತಕಗಳನ್ನು ಹೆಚ್ಚು ಓದುವ ಅಭ್ಯಾಸವಿಟ್ಟುಕೊಂಡಲ್ಲಿ ಜ್ಞಾನದ ಜೊತೆಗೆ ನಮ್ಮ ಕಣ್ಣಿಗೆ ಹಾಗೂ ಮನಸ್ಸಿಗೆ ಶಾಂತಿ ತಂದುಕೊಡುತ್ತದೆ ಎಂದು ತಿಳಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತಿಘಟ್ಟ ಶಾಖೆಯಿಂದ ರಂಗೇನಹಳ್ಳಿ, ಬಸವಪಟ್ಟಣ ಹಾಗೂ ಮಲ್ಲಿಗೆರೆ ಗೊಲ್ಲರಟ್ಟಿಯ ಸ್ವಸಹಾಯ ಸಂಘಗಳಿಗೆ ಒಟ್ಟು 19 ಲಕ್ಷ ರು. ಸಾಲ ಮಂಜೂರು ಪತ್ರ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತಿಘಟ್ಟ ಶಾಖೆ ಅಸಿಸ್ಟೆಂಟ್‌ ಮ್ಯಾನೇಜರ್‌ ಗಿರೀಶ್‌, ಮಣಿರತ್ನ, ಬಿ.ಸಿ. ಸುದರ್ಶನ್‌ ಕಾಮಲಾಪುರ, ರಘು, ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಗೂ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.