ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತನಗೆಲ್ಲರೂ ಮರ್ಯಾದೆ ಕೊಡಬೇಕು ಎಂಬ ಹುಂಬತನದಿಂದ ಇಂಟಲಿಜೆನ್ಸಿ ಬ್ಯುರೋ ಅಧಿಕಾರಿ ಎಂದು ಸುಳ್ಳು ಹೇಳಿ, ನಕಲಿ ಐಡಿ ಕಾರ್ಡ್, ನಕಲಿ ರಿವಾಲ್ವಾರ್ ಮತ್ತು ಕೆಟ್ಟುಹೋದ ವಾಕಿಟಾಕಿ ಇಟ್ಟುಕೊಂಡು ತಿರುಗಾಡುತ್ತಿದ್ದ ಯುವಕನನ್ನು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೂಲತಃ ಹಿಪ್ಪರಗಿ ಗ್ರಾಮದವನಾದ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಸಂಗಮೇಶ ಲಕ್ಕಪ್ಪಗೋಳ (೨೨) ವಶಕ್ಕೆ ಪಡೆದಿರುವ ನಕಲಿ ಇಂಟಲಿಜೆನ್ಸ್ ಅಧಿಕಾರಿ. ತನಗೆ ಎಲ್ಲರೂ ಮರ್ಯಾದೆ ಕೊಡಬೇಕು ಮತ್ತು ಮನೆಯಲ್ಲಿ ನಾನು ಸರ್ಕಾರಿ ಉನ್ನತ ಅಧಿಕಾರಿ ಎಂದು ಹೇಳಲು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದ. ಮಾತ್ರವಲ್ಲ, ಐಬಿ ನಕಲಿ ಐಡಿ ಕಾರ್ಡ್, ಕ್ಯಾಪ್, ನಕಲಿ ರಿವಾಲ್ವರ್ ಮತ್ತು ಕೆಟ್ಟುಹೋದ ವಾಕಿಟಾಕಿ ಹೊಂದಿದ್ದ ಆರೋಪಿಯು ಬೈಕ್ ಮೇಲೂ ಐಬಿ (ಇಂಟಲಿಜೆನ್ಸ್ ಬ್ಯೂರೋ) ಲೋಗೋ ಹಾಕಿಕೊಂಡು ತಿರುಗಾಡುತ್ತಿದ್ದ.
ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಈತನಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಬನಹಟ್ಟಿಯ ಬಿದರಿ ಸಮುದಾಯ ಭವನ ಹತ್ತಿರದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಗೆ ಈ ನಕಲಿ ಐಡಿ ಕಾರ್ಡ್ ತೋರಿಸಿದ್ದಾನೆ. ತಕ್ಷಣವೇ ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಸಂಗತಿ ಹೊರಗೆ ಬಂದಿದೆ.ಊರಿನಲ್ಲಿ ಗೌರವ ಸಿಗಲಿ ಹಾಗೂ ಮನೆಯವರು ಪದೇ ಪದೇ ಯಾವುದಾದರೂ ನೌಕರಿಗೆ ಸೇರು ಎಂದು ಒತ್ತಾಯ ಮಾಡುತ್ತಿದ್ದರು. ಈ ಒತ್ತಾಯಕ್ಕೆ ಈ ವೇಷ ಹಾಕಿದ್ದೇನೆಂದು ಆರೋಪಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಪ್ರಾಥಮಿಕ ವರದಿ ಪ್ರಕಾರ ಈತನ ಹಿನ್ನೆಲೆ ಯಾವುದೇ ಪ್ರಕರಣವಿಲ್ಲ. ಯಾರಿಗಾದರೂ ವಂಚನೆ ಅಥವಾ ಮೋಸಗೊಳಿಸಿದ ಮಾಹಿತಿಯೂ ಕಂಡು ಬಂದಿಲ್ಲ. ವಿಚಾರಣೆ ಬಳಿಕ ಈ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಅಧಿಕಾರಿ ಆಗಿದ್ದೇಗೆ?:ಹಿಪ್ಪರಗಿ ಗ್ರಾಮದಲ್ಲೊಂದು ಕಂಪ್ಯೂಟರ್ ಕೇಂದ್ರ ನಿರ್ವಹಿಸುತ್ತಿದ್ದ ಆರೋಪಿ ಸಂಗಮೇಶ ಲಕ್ಕಪ್ಪಗೋಳನಿಗೆ ಮನೆಯಲ್ಲಿ ಯಾವುದಾದರೂ ನೌಕರಿ ಸೇರು ಎಂದು ಒತ್ತಾಯವಿತ್ತು. ಅದರಂತೆ 2024ರ, ಜನವರಿಯಲ್ಲಿ ಇಂಟಲಿಜೆನ್ಸ್ ಬ್ಯೂರೋ ಇಲಾಖೆಯ ಪರೀಕ್ಷೆ ಕೂಡ ನಡೆದಿತ್ತು. ಇದ್ಯಾವುದಕ್ಕೂ ಹಾಜರಾಗದೇ ಮನೆಯವರಿಗೆ ಸುಳ್ಳು ಹೇಳಿ ನನಗೆ ನೌಕರಿ ದೊರೆತಿದೆ ಎಂದು ನಕಲಿ ಐಡಿ ಕಾರ್ಡ್ ತೋರಿಸಿದ್ದಾನೆ. ಇದನ್ನು ಆತನ ಕುಟುಂಬದವರು ಕೂಡ ನಂಬಿದ್ದಾರೆ. ಈಗ ಪೊಲೀಸರ ಬಂಧನದ ಬಳಿಕ ಸತ್ಯ ಹೊರಗೆ ಬಂದಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರೆಸಿದ್ದಾರೆ.