ವಿಜ್ಞಾನ- ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಅಗತ್ಯ: ಡಾ.ಶ್ರೀನಿವಾಸ್

| Published : Oct 06 2024, 01:23 AM IST

ಸಾರಾಂಶ

ಚೈನಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಅಧಿಪತ್ಯ ಮೆರೆದಿವೆ. ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಾವಲಂಬಿಯಾಗಿದೆ. ಅದಕ್ಕಾಗಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಪ್ರಗತಿಯತ್ತ ಮುನ್ನಡೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ. ಅದಕ್ಕಾಗಿ ಯುವ ಸಮೂಹ ಒಗ್ಗೂಡಿ ಶ್ರಮಿಸಬೇಕಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಡಾ.ಶ್ರೀನಿವಾಸ ತಾಳಬಟ್ಟಲು ಸಲಹೆ ನೀಡಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರ್ ವಿದ್ಯಾರ್ಥಿಗಳ ಶೃಂಗ ಸಭೆಯಲ್ಲಿ ಮಾತನಾಡಿದರು.

ಚೈನಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಅಧಿಪತ್ಯ ಮೆರೆದಿವೆ. ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಾವಲಂಬಿಯಾಗಿದೆ. ಅದಕ್ಕಾಗಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಪ್ರಗತಿಯತ್ತ ಮುನ್ನಡೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆಗಳು, ಆವಿಷ್ಕಾರಗಳು, ಬೆಳವಣಿಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಹೊಸ ಹೊಸ ಸಂಶೋಧನೆಗಳಿಂದ ಎದುರಾಗುತ್ತಿರುವ ಸಮಸ್ಯೆಗಳೇನು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಆಲೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಎಲ್ಲವನ್ನೂ ಕಾಲೇಜುಗಳು, ಸರ್ಕಾರಗಳೇ ಕಲಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಛಲ, ಆತ್ಮವಿಶ್ವಾಸದೊಂದಿಗೆ ಸ್ವಯಂಪ್ರಯತ್ನದೊಂದಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನಸಂಪಾದನೆ ಮಾಡಬೇಕು. ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ದಿಟ್ಟತನವನ್ನು ಬೆಳೆಸಿಕೊಳ್ಳಬೇಕು. ಆಗ ಏನನ್ನಾದರೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.

ನಮ್ಮ ತಂತ್ರಜ್ಞಾನವನ್ನು ಸೃಷ್ಟಿಸಿಕೊಳ್ಳಬೇಕು. ಮೊಬೈಲ್, ಮಿಲಿಟರಿ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾದಾಗ ದೇಶದ ಆರ್ಥಿಕ ಮಟ್ಟವೂ ಬೆಳವಣಿಗೆ ಸಾಧಿಸುತ್ತದೆ. ಆ ನಿಟ್ಟಿನಲ್ಲಿ ಹೊಸತನ್ನು ಹುಡುಕುವ, ಸಂಶೋಧಿಸುವ, ಪ್ರಸ್ತುತ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳು ಮುಕ್ತವಾಗಿ ತೆರೆದುಕೊಳ್ಳಬೇಕಿದೆ. ನಿರಂತರ ಕಲಿಕೆಯೊಂದಿಗೆ ಜ್ಞಾನವನ್ನು ವಿಕಾಸ ಮಾಡಿಕೊಂಡು ಮಹತ್ವವಾದುದನ್ನು ಸಾಧಿಸುವ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಸುಧೀಂದ್ರ ಕೌಶಿಕ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಮಸ್ಯೆಗಳಿಗೆ ಕೊನೆ ಎನ್ನುವುದೇ ಇಲ್ಲ. ಅವುಗಳಿಗೆ ಪರಿಹಾರ ಹುಡುಕುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದೋ ಒಂದು ಕ್ಷೇತ್ರಕ್ಕೆ ಜ್ಞಾನವನ್ನು ಸೀಮಿತಗೊಳಿಸಿಕೊಳ್ಳದೆ ಎಲ್ಲಾ ಕ್ಷೇತ್ರಗಳ ಬಗೆಗಿನ ಜ್ಞಾನವನ್ನು ಸಂಪಾದಿಸುವ ಸಾಮರ್ಥ್ಯ ಹೊಂದಬೇಕು. ವೈಫಲ್ಯಕ್ಕೆ ಹೆದರಬಾರದು. ಹಿಡಿದ ಕೆಲಸವನ್ನು ಪೂರ್ಣಗೊಳಿಸುವವರೆಗೆ ಹಿಂದೆ ಸರಿಯದಂತೆ ಪಣ ತೊಡಬೇಕು. ಆಗ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ದೃಷ್ಟಿಕೋನ ಬದಲಾವಣೆಯಾಗಬೇಕು. ಈಗ ಇರುವುದನ್ನೇ ಬೇರೆ ರೀತಿಯಲ್ಲಿ ನೋಡುವ, ಆಲೋಚಿಸುವ, ಆವಿಷ್ಕಾರದ ಕಡೆಗೆ ಹೊರಳಿಸುವ ಮನೋಭಾವ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಹೊಸ ಹೊಸ ಪ್ರಯತ್ನಗಳನ್ನು ನಡೆಸಿದಾಗ ಅಲ್ಲೇನೋ ಮಹತ್ವವಾದದ್ದು ನಿಮಗೆ ಸಿಗಬಹುದು. ವಿದ್ಯಾರ್ಥಿಗಳ ಆಲೋಚನೆಗಳು ನಿಂತ ನೀರಾಗದೆ, ಸದಾ ಹರಿಯುವ ನದಿಯಂತಿರಬೇಕು. ಆಗ ಕ್ರಿಯಾಶೀಲತೆ, ಸಂಶೋಧನಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ನುಡಿದರು.

ಕೃತಕ ತಂತ್ರಜ್ಞಾನದಿಂದ ಉಪಯೋಗವಾಗುವುದಿಲ್ಲ. ಅದು ನಾವು ಹೇಳಿದ್ದನ್ನಷ್ಟೇ ಮಾಡುತ್ತದೆ. ಯಾವುದನ್ನು ಯಾವಾಗ ಯಾವ ರೀತಿ ಬಳಸಿಕೊಳ್ಳಬೇಕೆಂಬ ಅರಿವು, ಕ್ರಿಯಾಶೀಲತೆ, ಸಮಯಪ್ರಜ್ಞೆ, ಬುದ್ಧಿಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಹಾಗಾಗಿ ಕೃತಕ ತಂತ್ರಜ್ಞಾನದ ಮೇಲೆ ಅವಲಂಬಿರಾಗದೆ, ಅದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನೂ ನೀಡದೆ ವಿದ್ಯಾರ್ಥಿಗಳ ಒಳಗಿರುವ ಪ್ರತಿಭಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಒಗ್ಗೂಡಿ ಕೆಲಸ ಮಾಡುವ ಮನೋಭಾವ ಹೆಚ್ಚಾದಾಗ ದೇಶಕ್ಕೆ ಕೊಡುಗೆಯನ್ನು ನೀಡಲು ಸಾಧ್ಯ ಎಂದು ತಿಳಿಸಿದರು.

ಮಂಗಳೂರು, ಮೈಸೂರು, ಉತ್ತರ ಕರ್ನಾಟಕ ವಿಭಾಗಗಳಿಂದ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಪುನೀತ್‌ಕುಮಾರ್ ಇತರರಿದ್ದರು.