ಸಾರಾಂಶ
ವಿದ್ಯಾಭ್ಯಾಸದ ಸಮಯದಲ್ಲಿ ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುವುದನ್ನು ಹಿರಿಯ ವಿದ್ಯಾರ್ಥಿಗಳಾದ ನೀವು ನಿರೂಪಿಸಿದ್ದೀರಿ. ಹಲವು ಮಂದಿ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಮೂಲಕ ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುವುದು ಶ್ಲಾಘನೀಯ.
ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಸಾರ್ಥಕ ಜೀವನ ಕಟ್ಟಿಕೊಂಡರೆ ಅದಕ್ಕಿಂತ ಆತ್ಮತೃಪ್ತಿ ಶಿಕ್ಷಕರಿಗೆ ಮತ್ತೊಂದಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಶಿವಬೋರಯ್ಯ ಹೇಳಿದರು.ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆ ಗ್ರಾಮದ ಬಿ.ಎಚ್.ಮಂಗೇಗೌಡ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸದ ಸಮಯದಲ್ಲಿ ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುವುದನ್ನು ಹಿರಿಯ ವಿದ್ಯಾರ್ಥಿಗಳಾದ ನೀವು ನಿರೂಪಿಸಿದ್ದೀರಿ. ಹಲವು ಮಂದಿ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಮೂಲಕ ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುವುದು ಶ್ಲಾಘನೀಯ. ಇಂತಹ ಅಮೃತ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಶಿಕ್ಷಕರ ಜೀವನವನ್ನು ಸಾರ್ಥಕಗೊಳಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಾಳ್ಮೆ, ನಂಬಿಕೆ ಮತ್ತು ಸಹಕಾರದಿಂದ ಉತ್ತಮ ಸಂಸಾರ ನಡೆಸಲು ಸಾಧ್ಯವಿದೆ. ಪ್ರತಿಯೊಬ್ಬರು ಸುಂದರ ಸಂಸಾರವನ್ನು ನಡೆಸುವ ಮೂಲಕ ಮಾನವ ಜನ್ಮಕ್ಕೆ ಸಾರ್ಥಕತೆ ಒದಗಿಸಬೇಕು ಎಂದು ಹಿರಿಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉಪನ್ಯಾಸಕರು ಮತ್ತು ಪ್ರಾಧ್ಯಾಪಕರಿಗೆ ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದರು. ಹಿರಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿ ಜೀವನವನ್ನು ಮೇಲುಕು ಹಾಕಿದರು.ಈ ವೇಳೆ ಕಾಲೇಜಿನ ಪ್ರಾಂಶುಪಾಲ ಅಪ್ಪಾಜಪ್ಪ, ನಿವೃತ್ತ ಪ್ರಾಂಶುಪಾಲ ಶಿವಬೋರಯ್ಯ, ಪ್ರಾಧ್ಯಾಪಕರಾದ ಕೃಷ್ಣ, ನಾಗರಾಜು, ಶಿವರಾಜು, ರಮೇಶ್, ನಾಗೇಂದ್ರ, ಹಿರಿಯ ವಿದ್ಯಾರ್ಥಿಗಳಾದ ಇಂದುಶೇಖರ್, ದಿಲೀಪ್, ದೀಪಕ್ ಕುಮಾರ್, ಪೂರ್ಣಿಮಾ, ಜಿ.ಎಚ್. ರಾಜೇಶ್ವರಿ, ನೇತ್ರಾ, ಪದ್ಮ, ಭವಿತ, ಲೀಲಾವತಿ, ಸುಧಾಕರ, ರಾಧಿಕಾ ಪ್ರಸಾದ್, ಶಶಿಕಲಾ, ಸಿಂಧೂರಿ ಸೇರಿದಂತೆ ಇತರರಿದ್ದರು.