ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಡೂರು ಆರೋಗ್ಯ ಉತ್ಸವ- 2026 ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಕೂರೋನಾ ಕಾಲಘಟ್ಟದ ಕರಾಳ ನೆನಪಿನ ದಿನಗಳಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರನ್ನು ಉಳಿಸಲು ಹಗಲಿರುಳೂ ಶ್ರಮಿಸಿದ ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆಯನ್ನು ಎಲ್ಲರೂ ಕೃತಜ್ಞತೆಯಿಂದ ಸ್ಮರಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶುಕ್ರವಾರ ಪಟ್ಟಣದ ಹೊರವಲಯದ ಹೆರಿಟೇಜ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಡೂರು ಆರೋಗ್ಯ ಉತ್ಸವ- 2026 ಉದ್ಘಾಟಿಸಿ ಮಾತನಾಡಿ ಜನತೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮ ಮಹತ್ವದ್ದು. ಕ್ಷೇತ್ರದ ಎರಡು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳು ಈಗ ಲಭ್ಯವಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಮರ್ಪಕವಾಗಿ ದೊರೆಯುತ್ತಿದೆ.

ಕಡೂರು ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಆರೋಗ್ಯ ಸೇವೆ ವಿಸ್ತರಣೆ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೇನೆ. ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ನೌಕರರ ಏಕತಾನತೆ ಹೋಗಲಾಡಿಸಲು ಇಂತಹ ಕಾರ್ಯಕ್ರಮ ಆಯೋಜನೆ ಅಗತ್ಯ ಎಂದು ಶ್ಲಾಘಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು ಮಾತನಾಡಿ, ಕ್ಷೇತ್ರದ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಉಳ್ಳ ಶಾಸಕರು ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಇಲಾಖೆಗೆ ಉಳಿಸಿಕೊಟ್ಟಿದ್ದಾರೆ. ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ. ಶಾಸಕರು ಈ ಕುರಿತು ಗಮನ ಹರಿಸಬೇಕು ಎಂದು ಕೋರಿದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ದತ್ತಾತ್ರಿ ಮಾತನಾಡಿ, ಆರೋಗ್ಯ ಇಲಾಖೆ ಎಲ್ಲ ನೌಕರರು ಪ್ರತಿ ಕ್ಷಣ ಜನರ ಆರೋಗ್ಯಕ್ಕಾಗಿ ನಿರಂತರ ಶ್ರಮಿಸುತ್ತಾರೆ. ಇಲಾಖೆ ವ್ಯಾಪ್ತಿಯಲ್ಲಿ 29 ಆಸ್ಪತ್ರೆಗಳಿದ್ದು, 800 ನೌಕರರಿದ್ದು, ಅವರಿಗೆ ವೈಯುಕ್ತಿಕವಾಗಿ ಕಳೆಯಲು ಒಂದಿಷ್ಟು ಸಮಯ ದೊರೆಯುವುದು ತೀರಾ ಕಡಿಮೆ. ಆದ್ದರಿಂದ ಅವರ ಏಕತಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹಿಳಾ ನೌಕರರಿಗೆ ಅನೇಕ ಆಟ ಆಯೋಜಿಸಿ ಆರೋಗ್ಯ ಇಲಾಖೆ ಎಲ್ಲ ನೌಕರರ ಸಮ್ಮಿಲನ ಏರ್ಪಡಿಸಲಾಗಿದೆ ಎಂದರು.ತಾಲೂಕಿನ ಎಲ್ಲ ಆರೋಗ್ಯ ಇಲಾಖೆಗಳ ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಮಂದಾರ ಮತ್ತು ಡಾ.ಭಾರ್ಗವಿ ನೀಡಿದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಡಾ.ಉಮೇಶ್, ಡಾ.ಚಂದಾ, ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಡಾ. ಶಿವಕುಮಾರ್, ಡಾ.ಶಶಿಕಲಾ, ಡಾ.ಸೀಮಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ತಾಲೂಕಿನ ಆರೋಗ್ಯ ಇಲಾಖೆಯ ನೌಕರರು, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.2ಕೆಕೆಡಿಯು1.


ಕಡೂರು ಪಟ್ಟಣದ ಹೆರಿಟೇಜ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸಹಯೋಗದ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಡೂರು ಆರೋಗ್ಯ ಉತ್ಸವ- 2026 ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.