ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸೇರಿದಂತೆ ನೆರೆಯ ಗಡಿ ಜಿಲ್ಲೆಗಳ ಭಾಗಗಳಲ್ಲಿ ಕಲಬೆರಕೆ ಜೇನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ತಂಡದ ಜಾಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ 20ಕ್ಕೂ ಅಧಿಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.ಜಿಲ್ಲೆಯ ಕುಶಾಲನಗರ, ತೊರೆನೂರು, ನೆರೆಯ ಗಡಿಭಾಗದ ಕೊಣ್ಣನೂರು ವ್ಯಾಪ್ತಿಯಲ್ಲಿ ರಸ್ತೆ ಬದಿ ಮಾರಾಟ ಮಾಡಲು ಬಳಸುತ್ತಿದ್ದ ಸುಮಾರು 100 ಲೀಟರ್‌ಗಿಂತಲೂ ಅಧಿಕ ಜೇನು ತುಪ್ಪ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಡಾ. ಅನಿಲ್ ಧವನ್ ಮತ್ತು ಸಿಬ್ಬಂದಿ ಕುಶಾಲನಗರ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಕುಶಾಲನಗರ ಬೈಚನಹಳ್ಳಿ ಬಳಿ, ತೊರೆನೂರು ಮತ್ತು ನೆರೆಯ ಗಡಿಭಾಗದ ಹಾಸನ ಜಿಲ್ಲೆಯ ಕೊಣನೂರು ಬಳಿ ದಾಳಿ ಮಾಡಿದ್ದಾರೆ.ಮೂಲತಃ ಬಿಹಾರ ರಾಜ್ಯದ ಹಲವು ಮಂದಿ ಬೆಂಗಳೂರಿನ ವಿಳಾಸದಲ್ಲಿ ನೆಲೆಸಿದ್ದು ಆಟೋಗಳ ಮೂಲಕ ಜಿಲ್ಲೆಗೆ ಆಗಮಿಸಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದು ರಸ್ತೆ ಬದಿಯಲ್ಲಿ ನಕಲಿ ಜೇನುತುಪ್ಪ ಮಾರಾಟ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ದುಪ್ಪಟ್ಟು ದರದಲ್ಲಿ ನಕಲಿ ಜೇನು ಮಾರಾಟ ಮಾಡಿ ನಂತರ ಜಾಗ ಖಾಲಿ ಮಾಡುವ ಜಾಲ ಇದಾಗಿದ್ದು ಈ ಜೇನು ಸೇವಿಸಿದ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.ಈ ಸಂಬಂಧ ಕುಶಾಲನಗರ ಬೈಚನಹಳ್ಳಿ ಬಳಿ ಕಲಬೆರಕೆ ಜೇನು ಮಾರಾಟ ಮಾಡುತ್ತಿದ್ದ ತಂಡದ ನಾಲ್ಕು ಮಂದಿ ಹಾಗೂ ಎರಡು ಆಟೋಗಳನ್ನು ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಕೈಗೊಳ್ಳಲಾಗಿದೆ.
ಸ್ಥಳದಲ್ಲಿ ದೊರೆತ ಭಾರಿ ಪ್ರಮಾಣದ ಜೇನುತುಪ್ಪ ಪಶಪಡಿಸಿಕೊಂಡ ಪೊಲೀಸರು ಗುಣಮಟ್ಟ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ.ಉಳಿದಂತೆ ಹೆಚ್ಚುವರಿ ದೊರೆತ ನೂರಾರು ಲೀಟರ್ ಪ್ರಮಾಣದ ಜೇನುತುಪ್ಪ ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ತೊರೆನೂರು ಬಳಿ ಎರಡು ಆಟೋರಿಕ್ಷಾ ಗಳಲ್ಲಿ ಡ್ರಮ್ ಗಳಲ್ಲಿ ತುಂಬಿ ಕೆಲವು ವ್ಯಕ್ತಿಗಳು ಸಾಗುತ್ತಿರುವ ವೇಳೆಗೆ ಅಧಿಕಾರಿ ಅನಿಲ್ ಧವನ್ ಅವರ ತಂಡದ ಸದಸ್ಯರನ್ನು ವಶಕ್ಕೆ ತೆಗೆದುಕೊಂಡು ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.ಬೆಂಗಳೂರು ನೊಂದಣಿ ಸಂಖ್ಯೆ ಹೊಂದಿರುವ ಆಟೋವನ್ನು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು ವಿಚಾರಣೆ ಕೈಗೊಂಡಿದ್ದಾರೆ. ಉಳಿದಂತೆ ಆರೋಪಿಗಳ ಸಂಪೂರ್ಣ ಮಾಹಿತಿ ಕಲೆಹಾಕಿದ್ದು ಈ ವ್ಯಕ್ತಿಗಳು ಬಿಹಾರ ರಾಜ್ಯಕ್ಕೆ ಸೇರಿದವರಾಗಿದ್ದು ಬೆಂಗಳೂರಿನ ವಿಳಾಸದಲ್ಲಿ ಆಧಾರ್ ಕಾರ್ಡ್ ಹೊಂದಿರುವುದಾಗಿ ಮಾಹಿತಿ ಲಭಿಸಿದೆ.
ತೊರೆನೂರು ಬಳಿ ಆಟೋ ಒಂದರಲ್ಲಿ 100 ಲೀಟರ್ ಗಿಂತ ಅಧಿಕ ಪ್ರಮಾಣದ ನಕಲಿ ಜೇನು ತುಪ್ಪ ಪತ್ತೆಯಾಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾಹನಗಳನ್ನು ಹಸ್ತಾಂತರಿಸಲಾಗಿದೆ ಎಂದು ಡಾ. ಅನಿಲ್ ಧವನ್ ಮಾಹಿತಿ ನೀಡಿದ್ದಾರೆ.ಸಾರ್ವಜನಿಕರು ಎಚ್ಚರ ವಹಿಸಿ:
ಇಂತಹ ನಕಲಿ ಜೇನುತುಪ್ಪ ಖರೀದಿಸುವ ಸಂದರ್ಭ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅನಿಲ್ ಧವನ್ ತಿಳಿಸಿದ್ದಾರೆ.ಇಂತಹ ಜಾಲದ ತಂಡದ ಸದಸ್ಯರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಹಕಾರ ಪಡೆಯಲಾಗುವುದು ಎಂದು ಧವನ್ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗದ ಅಧಿಕಾರಿ ಮಂಜುನಾಥ್, ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್, ಕುಶಾಲನಗರ ಅಪರಾಧ ಪತ್ತೆ ವಿಭಾಗದ ಠಾಣೆ ಅಧಿಕಾರಿ ಎಚ್.ಟಿ. ಗೀತಾ, ಸಹಾಯಕ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿ ಪಾಲ್ಗೊಂಡಿದ್ದರು.