ಅಸಲಿ ಎಂದು ನಂಬಿಸಿ, ನಕಲಿ ಚಿನ್ನ ಮಾರಾಟ: ಓರ್ವ ಬಂಧನ

| Published : Sep 01 2024, 01:53 AM IST

ಸಾರಾಂಶ

ಅಸಲಿ ಚಿನ್ನ ಎಂದು ನಂಬಿಸಿ, ನಕಲಿ ಚಿನ್ನ ಮಾರಾಟ ಮಾಡುತ್ತಿದ್ದವನನ್ನು ಬೀರೂರು ಪೋಲಿಸರು ಬಂಧಿಸಿ ಆತನಿಂದ ₹2 ಲಕ್ಷ ಹಣ ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೀರೂರು

ಅಸಲಿ ಚಿನ್ನ ಎಂದು ನಂಬಿಸಿ, ನಕಲಿ ಚಿನ್ನ ಮಾರಾಟ ಮಾಡುತ್ತಿದ್ದವನನ್ನು ಬೀರೂರು ಪೋಲಿಸರು ಬಂಧಿಸಿ ಆತನಿಂದ ₹2 ಲಕ್ಷ ಹಣ ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ತಮಿಳುನಾಡಿನ ಮಧುರೈ ನಿವಾಸಿ ವೆಂಕಟೇಶನ್ ಎಂಬುವರಿಗೆ ಕರ್ನಾಟಕದ ರವಿ ಎಂಬಾತ ಫೋನ್ ಕರೆ ಮಾಡಿ ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಲವಾರು ಚಿನ್ನದ ನಾಣ್ಯ ಸಿಕ್ಕಿವೆ, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆಂದು ನಂಬಿಸಿ ಜೂ.7ರಂದು ಅವರನ್ನು ಬೀರೂರಿನ ಠಾಣಾ ಸರಹದ್ದಿಗೆ ಕರೆಸಿಕೊಂಡು ಒಂದು ಅಸಲಿ ಚಿನ್ನದ ನಾಣ್ಯ ಸ್ಯಾಂಪಲ್‌ಗೆ ಕೊಟ್ಟು ಕಳುಹಿಸಿರುತ್ತಾನೆ. ಇದನ್ನು ಪರಿಶೀಲಿಸಿ ವೆಂಕಟೇಶನ್ ಅಸಲಿ ಎಂದು ತಿಳಿದ ಮೇಲೆ ಆ.29ರಂದು ₹2 ಲಕ್ಷವನ್ನು ಅವರ ಸ್ನೇಹಿತರ ಬಳಿ ಸಾಲ ಮಾಡಿ ಹೊಂದಿಸಿಕೊಂಡು ಪುನಃ ಬೀರೂರಿಗೆ ಬಂದು ರವಿಗೆ ಹಣ ನೀಡಿದ್ದಾನೆ. ರವಿಯು ಸುಮಾರು 200ಗ್ರಾಂ ನಷ್ಟು ನಕಲಿ ಚಿನ್ನದ ನಾಣ್ಯ ನೀಡಿದ್ದು, ನಂತರದಲ್ಲಿ ಪರಿಶೀಲಿಸಿದಾಗ ಆತನಿಂದ ಮೋಸ ಹೋಗಿರುವ ವಿಚಾರ ತಿಳಿದು ಆ.30ರಂದು ಬೀರೂರು ಪೊಲೀಸ್ ಠಾಣೆಗೆ ವೆಂಕಟೇಶನ್ ಬಂದು ದೂರು ನೀಡಿದ್ದು, ಅದರಂತೆ ಬೀರೂರು ಪೊಲೀಸ್ ಠಾಣಾ ಮೊ.ನಂ 109/2024 ಕಲಂ 318 (2) 318 (4) ಬಿ.ಎನ್.ಎಸ್. ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿಯನ್ನು ಶೀಘ್ರ ಬಂಧಿಸುವ ಸಲುವಾಗಿ ಎಸ್ಪಿ ಡಾ.ವಿಕ್ರಂ ಅಮಟೆ, ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ.ಜಿ, ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿ ರಾವ್, ವೃತ್ತ ನಿರೀಕ್ಷಕ ಶ್ರೀ ಶ್ರೀಕಾಂತ್ ಎಸ್.ಎನ್ ಬೀರೂರು ಇವರ ಮಾರ್ಗದರ್ಶನದಲ್ಲಿ ಬೀರೂರು ಪೊಲೀಸ್ ಠಾಣೆ ಪಿಎಸ್‌ಐ ಶ್ರೀ ಸಜಿತ್ ಕುಮಾರ್ ಜಿ.ಆರ್ ನೇತೃತ್ವದಲ್ಲಿ ಹೆಡ್ ಕಾನ್ಸಟೇಬಲ್‌ ಡಿ.ವಿ.ಹೇಮಂತ್ ಕುಮಾರ್ ಹಾಗೂ ಕಾನ್ಸಟೇಬಲ್‌ಗಳಾದ ಬಿ.ಎಚ್.ರಾಜಪ್ಪ ಮತ್ತು ಕೆ.ದುರುಗಪ್ಪ ತಂಡವು ಪ್ರಕರಣದಲ್ಲಿ ಆರೋಪಿ ಪತ್ತೆಗೆ ಕೂಡಲೇ ಕಾರ್ಯಪ್ರವೃತ್ತರಾಗಿ ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ಆರೋಪಿ ಪತ್ತೆ ಬಗ್ಗೆ ಎಲ್ಲಾ ರೀತಿಯಲ್ಲಿಯೂ ಮಾಹಿತಿ ಕಲೆಹಾಕಿದ ತನಿಖಾ ತಂಡವು ಖಚಿತ ಮಾಹಿತಿ ಮೇರೆಗೆ ಆರೋಪಿ ರಾಜಪ್ಪ ಬಿನ್ ನಿಂಗಪ್ಪ, ಹಲಕನಹಾಳ್, ಚನ್ನಗಿರಿ ತಾ. ದಾವಣಗೆರೆ ಜಿಲ್ಲಾ ಈತನನ್ನು ಬಂಧಿಸಿ ಸದರಿಯವನು ಫಿರ್ಯಾದುದಾರರಿಗೆ ಮೋಸ ಮಾಡಿ ಮನೆಯಲ್ಲಿ ಬಚ್ಚಿಟ್ಟಿದ್ದ ₹2.00.000 ನಗದನ್ನು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣದ ಪತ್ತೆಗಾಗಿ ಶ್ರಮಿಸಿದ ತನಿಖಾ ತಂಡವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಪ್ರಶಂಶಿಸಿ ಶ್ಲಾಘಿಸಿರುತ್ತಾರೆ.