ಸಾರಾಂಶ
ಹುಬ್ಬಳ್ಳಿ:
ಇಲ್ಲಿನ ಅರವಿಂದ ನಗರದ ಪಿಆ್ಯಂಡ್‌ಟಿ ಕ್ವಾಟರ್ಸ್‌ನಲ್ಲಿರುವ ಪಾಳುಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನರನ್ನು ಬಂಧಿಸಿ ಅವರಿಂದ ₹1 ಲಕ್ಷ ಮೌಲ್ಯದ ಗಾಂಜಾ ಸೇರಿದಂತೆ ₹4.52 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ದಾಳಿ ಮಾಡಿ 12 ಜನರನ್ನು ವಶಕ್ಕೆ ಪಡೆದಿದ್ದು, ಬಂಧಿತರಿಂದ ₹1 ಲಕ್ಷ ಮೌಲ್ಯದ 1365 ಗ್ರಾಂ ಗಾಂಜಾ, 9 ಮೊಬೈಲ್, 3 ಬೈಕ್, ₹ 2 ಸಾವಿರ ನಗದು ಸೇರಿ ಒಟ್ಟು ₹ 4.52 ಲಕ್ಷ ಮೌಲ್ಯದ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದರು.
ಪ್ರಕರಣದಲ್ಲಿ ನಗರದ ವಿವಿಧ ಬಡಾವಣೆಯ ಅಭಿಷೇಕ ಹನಮಂತ, ಮಹ್ಮದಆಯಾಜ್ ಜೈನುಲಾಬುದ್ದೀನ, ಇಸ್ಮಾಯಿಲ್ ಮೆಹಬೂಬಾಲಿ, ಜಾಫರ ಅಲಿಯಾಸ್ ಬಾಂಬೆಜಾಫರ ಮಕ್ಕುಲ್, ಜುಬೇರಅಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಅಹ್ಮದ, ಮಹ್ಮದಸಾಧೀಕ ರಿಯಾಜ, ರೋಶನ್ ಸೋಯಬ ಅಲಿಯಾಸ್ ಬಬ್ಲೂ ಜಮೀಲಅಹ್ಮದ್, ಸಲೀಂ ಹಜರತಸಾಬ, ಕರೀಂ ಜಾಂಗೀರಖಾನ ಎಂಬುವರನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದರು.ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಪಿಐ ಸುರೇಶ ಹಳ್ಳೂರ, ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.ಡ್ರಗ್ಸ್ ಮುಕ್ತ ನಗರವಾಗಿಸಲು ಬದ್ಧ:
ಹು-ಧಾ ಕೆಲವೇ ದಿನಗಳಲ್ಲಿ ಡ್ರಗ್ಸ್ ಮುಕ್ತ ನಗರವನ್ನಾಗಿಸಲು ಸಂಕಲ್ಪ ತೊಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.ಕಳೆದ ಹಲವು ದಿನಗಳಿಂದ ಮಹಾನಗರದಲ್ಲಿ ಡ್ರಗ್ಸ್‌ನ ದೊಡ್ಡ ಜಾಲವೇ ನೆಲೆಯೂರಿದೆ. ಇದನ್ನು ಬೇರುಸಮೇತ ಕಿತ್ತುಹಾಕಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಈಗಾಗಲೇ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಡ್ರಗ್ಸ್ ಪೆಡ್ಲರ್, ಮಾರಾಟಗಾರರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಗಾಂಜಾ, ಡ್ರಗ್ಸ್ ಮಾರಾಟವಾಗುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ನಿಗಾ ವಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ವಿಶೇಷ ತಂಡ ರಚಿಸುವ ಮೂಲಕ ಡ್ರಗ್ಸ್ ಪೆಡ್ಲರ್‌ಗಳ ಬಂಧನಕ್ಕೆ ಹದ್ದಿನ ಕಣ್ಣಿಡಲಾಗಿದೆ ಎಂದರು.
ಈ ಹಿಂದೆ ಗಾಂಜಾ, ಡ್ರಗ್ಸ್ ಪೆಡ್ಲರ್‌ಗಳು ಹೆಚ್ಚಾಗಿ ಉಳ್ಳವರು, ಶ್ರೀಮಂತರ ಗಾಳ ಹಾಕುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಬಡವರು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಇದರ ಜಾಲಕ್ಕೆ ಸಿಲುಕಿ ನರಳುತ್ತಿದ್ದಾರೆ. ಇಂತಹವರಿಗೆ ಡ್ರಗ್ಸ್‌ನಿಂದಾಗುವ ಹಾನಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ.ಗಾಂಜಾ ವ್ಯಸನಿಗಳ ಬಂಧನ:
ಗಾಂಜಾ ಮಾರಾಟ ಎಷ್ಟು ಅಪರಾಧವೋ ಸೇವನೆಯೂ ಅಷ್ಟೇ ಅಪರಾಧ. ಹಾಗಾಗಿ ಈಗಾಗಲೇ ಹಲವು ಗಾಂಜಾ ಪೆಡ್ಲರ್, ಮಾರಾಟಗಾರರನ್ನು ಬಂಧಿಸಲಾಗಿದೆ. ಅವರಿಂದ ಯಾರು ಮಾದಕ ವಸ್ತು ಖರೀದಿಸುತ್ತಿದ್ದರು ಎಂಬುದರ ಸಂಪೂರ್ಣ ಮಾಹಿತಿ ಪಡೆದು ಕೆಲವೇ ದಿನಗಳಲ್ಲಿ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಿಂದ ಏಕಕಾಲಕ್ಕೆ ಗಾಂಜಾ ವ್ಯಸನಿಗಳ ಮನೆಗಳಿಗೆ ದಾಳಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಶಂಕಿತ ಮಾದಕ ವ್ಯಸನಿಗಳು ಕಂಡುಬಂದರೆ ಅಂತಹವರನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಲಾಗುವುದು. ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಲ್ಲಿ ಅಂತಹವರ ಮೇಲೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.