ದೇಶದಲ್ಲಿ ನಿರುದ್ಯೋಗದ ಪ್ರಮಾಣ ಗಂಭೀರ ಸ್ವರೂಪದಲ್ಲಿದೆ

| Published : Apr 27 2025, 01:34 AM IST

ಸಾರಾಂಶ

ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅಪಾರವಾದ ಅವಕಾಶ ಇದೆ. ಆದರೆ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಸರ್ಕಾರಗಳು, ಬಡತನ ಹೆಚ್ಚಾಗಿರುವ ಕಾರಣ ಜನಸಂಖ್ಯೆ ಹೆಚ್ಚಳವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಗಂಭೀರ ಸ್ವರೂಪದಲ್ಲಿದೆ. ಯುವಜನರಿಗೆ ಅವರ ಅರ್ಹತೆಗೆ ಅನುಸಾರ ಉದ್ಯೋಗ ಸಿಗುತ್ತಿಲ್ಲ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಕಳವಳ ವ್ಯಕ್ತಪಡಿಸಿದರು.

ಕುವೆಂಪುನಗರದ ಗಾನಭಾರತಿ ಸಂಗೀತ ಸಭಾದಲ್ಲಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘವು ಶನಿವಾರ ಆಯೋಜಿಸಿದ್ದ ನಿರುದ್ಯೋಗ, ಕಡಿಮೆ ಉದ್ಯೋಗ ಹಾಗೂ ಉದ್ಯೋಗ ರಹಿತ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅಪಾರವಾದ ಅವಕಾಶ ಇದೆ. ಆದರೆ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಸರ್ಕಾರಗಳು, ಬಡತನ ಹೆಚ್ಚಾಗಿರುವ ಕಾರಣ ಜನಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆಂದು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ವಿವಿಧ ಖಾಸಗಿ ಕಂಪನಿಗಳಲ್ಲಿನ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದು, ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.65 ರಷ್ಟು ಜನ ದುಡಿಯುವವರಿದ್ದಾರೆ. ಆದರೆ, ದುಡಿಯಲು ಸಿದ್ಧರಿರುವರಿಗೆ ವಿದ್ಯಾರ್ಹತೆ ಮತ್ತು ಕೌಶಲ್ಯಕ್ಕೆ ಸರಿಸಮನಾದ ಉದ್ಯೋಗ ಸಿಗುತ್ತಿಲ್ಲ ಎಂದರು.

ಒಂದು ಕಡೆ ರೈತರ ಭೂಮಿ ಕಸಿದುಕೊಳ್ಳಲಾಗುತ್ತಿದೆ. ಕೈಗಾರಿಕೆಗಳಿಂದಲೂ ಕಾರ್ಮಿಕರನ್ನು ಹೊರ ನೂಕಲಾಗುತ್ತಿದೆ. ಇರುವ ಅಲ್ಪಸ್ವಲ್ಪ ಉದ್ಯೋಗವನ್ನೂ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿಕೊಂಡು ನಿರ್ವಹಿಸಲಾಗುತ್ತಿದೆ. ಇದರಿಂದ ಸಹ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಇವುಗಳ ವಿರುದ್ಧ ಯುವಜನರು ಜಾಗೃತಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಸುನಂದಾ ಮಾತನಾಡಿ, ನಿರುದ್ಯೋಗದ ಮೂಲ ಬಂಡಾವಳಶಾಹಿ ಆರ್ಥಿಕತೆಯಲ್ಲಿ ‌ಅಡಗಿದೆ. ಭಾರತ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ಪ್ರಕಾಶಿಸುತ್ತಿದೆ ಎನ್ನುವುದರಲ್ಲಿ ಅರ್ಥವಿಲ್ಲ. ದೇಶದ ಅಭಿವೃದ್ಧಿ ಕೇವಲ ರಸ್ತೆ, ಕಟ್ಟಡ ನಿರ್ಮಾಣವಲ್ಲ. ನಿರುದ್ಯೋಗ ಸಮಸ್ಯೆ ಕಡಿಮೆ ಇರಬೇಕು. ಆದರೆ, ದೇಶದಲ್ಲಿ ನಿರುದ್ಯೋಗ ಕಾಡುತ್ತಿದೆ ಎಂದರು.

ವಿಮಾ ನಿಗಮ ನೌಕರರ ಸಂಘದ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ನಾಗೇಶ್, ವಿಶ್ರಾಂತ ಕುಲಪತಿ ಪ್ರೊ. ಸಬೀಹಾ ಭೂಮಿಗೌಡ, ಪದಾಧಿಕಾರಿಗಳಾದ ಎಸ್. ಶ್ರೀಧರ್, ಎನ್.ಕೆ. ಬಾಲಾಜಿ ರಾವ್, ಉಮಾಪತಿ, ಸಿ.ಆರ್. ಕೃಷ್ಣಮೂರ್ತಿ ಮೊದಲಾದವರು ಇದ್ದರು.

----

ಕೋಟ್...

ಬಹುತೇಕರು ಸಂಬಳ ಪಡೆಯುವ ವಿವಿಧ ಕೆಲಸ ಬಿಟ್ಟು, ಸರ್ಕಾರ ಜಾರಿಗೆ ತಂದಿರುವ ಯೋಜನೆ ಮೂಲಕ ಸ್ವಯಂ ಉದ್ಯೋಗ ಆರಂಭಿಸುತ್ತಾರೆ. ಇದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಸರ್ಕಾರಗಳು ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿವೆ. ಆದರೆ, ಸ್ವಯಂ ಉದ್ಯೋಗ ನಡೆಸುವವರ ಆದಾಯ ಕಡಿಮೆ ಇದೆ.

- ಮೀನಾಕ್ಷಿ ಸುಂದರಂ, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿಐಟಿಯು

----

ಪ್ರಸ್ತುತ ಯಾರಿಗೂ ಕಾಯಂ ಉದ್ಯೋಗವಿಲ್ಲ. ಸರ್ಕಾರಿ ಕಚೇರಿಯಲ್ಲಿ 10 ಜನ ಶಾಶ್ವತ ನೌಕರರಿದ್ದರೆ, 25 ಜನ ಒಪ್ಪಂದ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸಾಮಾಜಿಕ‌ ಭದ್ರತೆ ಇಲ್ಲ.

- ಎಚ್‌.ಎಸ್‌. ಸುನಂದಾ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ,