ಪುತ್ತೂರು: ರಾಣಿ ಅಬ್ಬಕ್ಕಳ ಸಾಧನೆಗಳನ್ನು ರಾಷ್ಟ್ರವ್ಯಾಪಿಗೊಳಿಸುವ ನಿಟ್ಟಿನಲ್ಲಿ ‘ಅಬ್ಬಕ್ಕ @೫೦೦’ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಫೆ.೧೬ರಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಾವರ್ಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಿಕ್ ಮಹಾ ಸಂಘ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇತಿಹಾಸ ವಿಭಾಗ, ಐಕ್ಯೂಎಸಿ ಸಹಯೋಗದಲ್ಲಿ ಕಾರ್‍ಯಕ್ರಮ ನಡೆಯಲಿದೆ. ಪ್ರಾದೇಶಿಕ ಅಧ್ಯಯನಗಳ ಕುರಿತಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಷ್ಟಿಯಿಂದ, ದೇಶ ಪ್ರೇಮ ಪೂರಿತ ವೈಚಾರಿಕತೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.ಕಾರ್‍ಯಕ್ರಮವನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೆಹಲಿಯ ಎ.ಬಿ.ಆರ್.ಎಸ್.ಎಂ.ನ ರಾಷ್ಟ್ರೀಯ ಸಹ ಸಂಘಟನಾ ಕಾರ್‍ಯದರ್ಶಿ ಗುಂಟ ಲಕ್ಷ್ಮಣ್, ದೆಹಲಿಯ ಎ.ಬಿ.ಆರ್.ಎಸ್.ಎಂ. ಜಂಟಿ ಕಾರ್‍ಯದರ್ಶಿ ಡಾ. ಆಶೀಮ ಮಂಗ್ಳಾ, ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಬೆಂಗಳೂರು ಕೆ.ಆರ್.ಎಂ.ಎಸ್.ಎಸ್. ಅಧ್ಯಕ್ಷ ಪ್ರೊ. ಗುರುನಾಥ್ ಬಡಿಗೇರ ಉಪಸ್ಥಿತರಿರುವರು.ಅಬ್ಬಕ್ಕ ಪುರಸ್ಕಾರ:ಇದೇ ಸಂದರ್ಭ ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ನಡೆಯಲಿದ್ದು, ಮಹಿಳಾ ಸಬಲೀಕರಣದಲ್ಲಿ ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ, ದೈವಾರಾಧನೆಯಲ್ಲಿ ಪೆರುವಾಯಿಯ ಸುಂದರಿ ನಲಿಕೆ, ಸಮಾಜ ಸೇವೆ- ಸಂಘಟನೆಯಲ್ಲಿ ಮಂಗಳೂರು ಆಸರೆ ಚಾರಿಟೆಬಲ್ ಟ್ರಸ್ಟ್‌ನ ಡಾ. ಆಶಾ ಜ್ಯೋತಿ ರೈ, ಬಾಲ ಸಂಸ್ಕಾರ ಶಿಕ್ಷಣದಲ್ಲಿ ಮಂಗಳೂರು ತುಳುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಉದ್ಯಮಶೀಲತೆಯಲ್ಲಿ ದಾರಂದಕುಕ್ಕು ಮಂಗಳಾ ಎಂಟರ್‌ಪ್ರೈಸಸ್‌ನ ಮಹಾಲಕ್ಷ್ಮೀ, ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ತ್ರದಲ್ಲಿ ಮೂಡುಬಿದಿರೆ ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಆಂಬುಲೆನ್ಸ್ ಚಾಲಕಿ ಮಂಗಳೂರು ಕಾವೇರಿ ಆಂಬ್ಯುಲೆನ್ಸ್ ಸರ್ವಿಸ್‌ನ ಮಾಲೀಕರಾದ ಸಿ.ಎಸ್. ರಾಧಿಕಾ, ರುದ್ರಭೂಮಿ ಸೇವೆಯಲ್ಲಿ ಉಡುಪಿಯ ಬೀಡಿನಗುಡ್ಡೆ ವನಜಾ ಪೂಜಾರ್ತಿ, ನಾಟಿ ವೈದ್ಯ ಕ್ಷೇತ್ರದಲ್ಲಿ ವಿರಾಜಪೇಟೆಯ ಸೂಲಗಿತ್ತಿ ಮತ್ತು ನಾಟಿವೈದ್ಯೆ ಕೆ.ಬಿ. ಅಮ್ಮಣ್ಣಿ, ಭಾರತೀಯ ಕಲೆಗಳ ಕ್ಷೇತ್ರದಲ್ಲಿ ನಾಟ್ಯಾರಾಧನಾ ಮತ್ತು ಯಕ್ಷರಾಧನಾ ಕಲಾಕೇಂದ್ರ ಮಂಗಳೂರು ಇದರ ನಿರ್ದೇಶಕಿ ವಿದುಷಿ ಸುಮಂಗಲ ರತ್ನಾಕರ್ ರಾವ್, ತುಳು ಸಾಹಿತ್ಯ ಸಂಘಟನೆಯಲ್ಲಿ ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆಯ ಪ್ರವರ್ತಕಿ ಯಶೋದ ಕೇಶವ್, ಯಕ್ಷಗಾನ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಬೆಳುವಾಯಿ ಮೂಡಬಿದಿರೆಯ ಶುಭಾಶಯ ಜೈನ್, ಯಕ್ಷಗಾನದಲ್ಲಿ ಯಕ್ಷಗುರು ಮಂಗಳೂರು ಇದರ ಪೂರ್ಣಿಮಾ ಯತೀಶ್ ರೈ, ಪರಿಸರದಲ್ಲಿ ಮೂಡುಬಿದಿರೆ ಜೈನ ಪ.ಪೂ. ಕಾಲೇಜಿನ ಉಪನ್ಯಾಸಕಿ ಸಂಧ್ಯಾ, ತಾಳಮದ್ದಳೆ ಕ್ಷೇತ್ರದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಮಂಡಳಿಯಲ್ಲಿ ಅರ್ಥಧಾರಿಯಾಗಿರುವ ಶುಭಾ ಅಡಿಗ, ಆಯುರ್ವೇದ ಕ್ಷೇತ್ರದಲ್ಲಿ ಎಸ್ ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ಆಡಳಿತ ಪಾಲುದಾರೆ ರೂಪಲೇಖಾ, ಸಮುದಾಯ ಅಭಿವೃದ್ಧಿಯಲ್ಲಿ ಬಂಟ್ವಾಳ ಅನಂತಾಡಿಯ ಶೈನ್ ಇಂಡಿಯಾ ಟ್ರಸ್ಟ್‌ ನ ಸಂಸ್ಥಾಪಕಿ ಭವ್ಯರಾಣಿ ಪಿ.ಸಿ, ಭರತನಾಟ್ಯ ಕ್ಷೇತ್ರದಲ್ಲಿ ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯ ನಿರ್ದೇಶಕಿ ಶಾಲಿನಿ ಆತ್ಮಭೂಷಣ್, ಉದಯೋನ್ಮುಖ ಭರತನಾಟ್ಯ ಕಲಾವಿದೆ ಮಂಗಳೂರಿನ ಶ್ರಾವ್ಯ ಯು., ಪತ್ರಿಕೋದ್ಯಮ ವಿಭಾಗದಲ್ಲಿ ವಿಕ್ರಮ ಟಿವಿ ನಿರೂಪಕಿ ಶಹನಾ ಮುಮ್ತಾಜ್ ನೆಲ್ಯಡ್ಕ, ಯೋಗ ಮತ್ತು ಧ್ಯಾನ ಕ್ಷೇತ್ರದಲ್ಲಿ ಮಂಗಳೂರು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ಕೆ.ಎನ್. ದೀಪಿಕಾ ಅವರನ್ನು ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು. ಅಬ್ಬಕ್ಕಳ ಕುರಿತ ವಿಚಾರಗೋಷ್ಠಿ:

ಸಭಾ ಕಾರ್‍ಯಕ್ರಮದ ಬಳಿಕ ‘ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ’ ಕುರಿತು ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಉಪನ್ಯಾಸ ನೀಡಲಿದ್ದಾರೆ. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವಿಂದ್ರ ಪಿ. ಅಧ್ಯಕ್ಷತೆ ವಹಿಸಲಿದ್ದಾರೆ. ಆ ಬಳಿಕ ‘ಭಾರತದ ಇತಿಹಾಸ - ರಾಣಿ ಅಬ್ಬಕ್ಕಳ ಕೊಡುಗೆ’ ಕುರಿತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ಉಪನ್ಯಾಸ ನೀಡುವರು. ಸುಳ್ಯ ನೆಹರು ಮೊಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನದ ಬಳಿಕ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ವೀರ ರಾಣಿ ಅಬ್ಬಕ್ಕ-ಕಥಾ ಕೀರ್ತನೆ ನಡೆಯಲಿದೆ.

ಸಮಾರೋಪ ಸಮಾರಂಭ:

ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ದಿಲ್ಲಿಯ ಎ.ಬಿ.ಆರ್.ಎಸ್.ಎಂ.ನ ರಾಷ್ಟ್ರೀಯ ಸಹ ಸಂಘಟನಾ ಕಾರ್‍ಯದರ್ಶಿ ಗುಂಟ ಲಕ್ಷ್ಮಣ್ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಡುಬಿದಿರೆ ಜವನೆರ್ ಬೆದ್ರದ ಸಂಸ್ಥಾಪಕ ಅಮರ್ ಕೋಟೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಕಾರ್‍ಯಕ್ರಮ ಸಂಯೋಜಕರಾದ ವಿವೇಕಾನಂದ ಪದವಿ ಕಾಲೇಜು ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಪ್ರಮೋದ್ ಎಂ.ಜಿ., ಕನ್ನಡ ವಿಭಾಗ ಮುಖ್ಯಸ್ಥ ಡಾ. ಮನಮೋಹನ್ ಎಂ., ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ ಪಿ.ಆರ್., ಮಂಗಳೂರು ವಿಭಾಗ ಮಹಾವಿದ್ಯಾಲಯದ ಶಿಕ್ಷಕರ ಸಂಘದ ಸಂಯೋಜಕಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.