ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮುಟ್ಟಿನ ಸಮಯವನ್ನು ಬಿಟ್ಟು ಉಳಿದೆಲ್ಲಾ ಸಂದರ್ಭದಲ್ಲಿಯೂ ಮಹಿಳೆಯು ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲವನ್ನೂ ನಿಭಾಯಿಸುತ್ತಾಳೆ. ಈ ವೇಳೆ ಹೆಚ್ಚು ಜಾಗೃತಿ ಅಗತ್ಯ ಎಂದು ಜೆಎಸ್‌ಎಸ್ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಸೌಮ್ಯಾ ಹೇಳಿದರು.ನಗರದ ಸೆನೆಟ್ ಭವನದಲ್ಲಿ ಶನಿವಾರ ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಹಸಿರು ದಳ ಬೆಂಗಳೂರಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಮುಟ್ಟಿನ ನೈರ್ಮಲ್ಯ ವಿಷಯ ಕುರಿತು ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಮುಟ್ಟು ಮಹಿಳೆಯರಿಗೆ ನೈಸರ್ಗಿಕ ಭಾಗ. ಮುಟ್ಟಿನ ಸಂದರ್ಭದಲ್ಲಿ ಪ್ರತಿ ಹೆಣ್ಣೂ ಹಲವು ಸಮಸ್ಯೆ ಎದುರಿಸುತ್ತಾರೆ. ಘನ ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ಸಂಸ್ಕರಿಸದೆ ವಿಲೇವಾರಿ ಮಾಡಿದಲ್ಲಿ ವಾತಾವರಣದ ಮೇಲೆ ದುಷ್ಪರಿಣಾಮ ಉಂಟಾಗುತ್ತವೆ ಎಂದರು.ಸ್ಯಾನಟರಿ ಪ್ಯಾಡ್ ಗಳು ಬಹಳ ಮಹತ್ವದ್ದು. ಈ ದಿನಗಳಲ್ಲಿ ಪ್ರತಿ ನಾಲ್ಕರಿಂದ ಆರು ಗಂಟೆಗಳಿಗೊಮ್ಮೆ ಅದನ್ನು ಬದಲಿಸಬೇಕು. ಅದನ್ನು ಬದಲಿಸದೇ ಇದ್ದರೆ, ಅಧಿಕವಾಗಿ ಸಂಗ್ರಹಗೊಂಡ ಮಲಿನ ರಕ್ತದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಹೊಂದಿ ಸೋಂಕು ತಗಲುತ್ತದೆ ಎಂದು ಹೇಳಿದರು.ಪ್ಯಾಡ್ ಬಳಸುವ ಬದಲು ಮುಟ್ಟಿನ ಕಪ್‌ಬಳಸಬೇಕು. ರಬ್ಬರ್‌ಅಥವಾ ಸಿಲಿಕಾನ್ ನಿಂದ ಮಾಡಿದ ಸಣ್ಣ ಹೊಂದಿಕೊಳ್ಳುವ ಕೊಳವೆ ಆಕಾರದ ಕಪ್ ಆಗಿದೆ. ಇದನ್ನು ಮುಟ್ಟಿನ ಸಮಯದಲ್ಲಿ ಧರಿಸಿದರೆ ರಕ್ತಸ್ರಾವ ಸಂಗ್ರಹವಾಗುತ್ತದೆ. ಮುಟ್ಟಿನ ಹರಿವನ್ನು ಅವಲಂಭಿಸಿ 12 ಗಂಟೆಗಳವರೆಗೆ ಒಂದು ಕಪ್ ಧರಿಸಬಹುದು. ಅವುಗಳಲ್ಲಿ ಕೀಪರ್ ಕಮ್, ಮೂನ್ ಕಪ್, ಲುನೆಟ್ ಕಪ್ ಇವೆಲ್ಲವೂ ಮರುಬಳಕೆ ಮಾಡಬಹುದಾದ ಕಪ್ ಗಳಾಗಿದ್ದು ಅದನ್ನು ಬಳಸುವ ಹವ್ಯಾಸ ಮಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಡಾ.ಜೆ. ಶಿಲ್ಪಾ ಮಾತನಾಡಿದರು. ಆಡಳಿತ ಮತ್ತು ತರಬೇತಿ ಸಂಸ್ಥೆ ಮುಖ್ಯಸ್ಥೆ ಸಿ.ಎಸ್. ಕುಮುದಾ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಎಚ್.ಪಿ. ಜ್ಯೋತಿ, ಹಸಿರು ದಳದ ತರಬೇತುದಾರೆ ಪಿ. ದೇವಿ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ ಇದ್ದರು.