‘3 ಬಿಡಿಎ ಎಂಜಿನಿಯರ್‌ಗಳನ್ನು ಮಾತೃ ಇಲಾಖೆಗೆ ಕಳುಹಿಸಿ‘

| Published : Feb 22 2024, 01:47 AM IST

ಸಾರಾಂಶ

ಬಿಡಿಎನಲ್ಲಿ 8 ವರ್ಷದಿಂದ ಇರುವ ಮೂವರು ಎಂಜಿನಿಯರ್‌ಗಳನ್ನು ವರ್ಗಾಯಿಸುವಂತೆ ಸರ್ಕಾರಕ್ಕೆ ಹಿರಿಯ ವಕೀಲರೊಬ್ಬರು ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲ್ಯೂಡಿ) ಎರವಲು ಸೇವೆಯ ಮೇಲೆ ಬಿಡಿಎಗೆ ಬಂದು ಎಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಸಹಾಯಕ ಎಂಜಿನಿಯರ್‌ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.

ಈ ಕುರಿತು ಹಿರಿಯ ವಕೀಲರಾದ ಡಿ.ಎನ್‌.ರಾಮಕೃಷ್ಣ ಎಂಬುವರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ. ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್‌ಗಳಾದ ಸಿ.ವೀರಭದ್ರಯ್ಯ, ಎಸ್‌.ಹೆಂಜಾರಪ್ಪ, ರಾಜೇಶ್‌ ಎಸ್‌.ಅಗಡೀಕರ್‌ ಅವರು ಬಿಡಿಎಗೆ ಎರವಲು ಸೇವೆ ಮೇಲೆ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿರುದ್ಧ ಅವ್ಯವಹಾರಗಳಲ್ಲಿ ಪಾಲ್ಗೊಂಡಿರುವ ಕುರಿತು ದೂರುಗಳು ಬಂದಿದೆ. ಆದ್ದರಿಂದ ಕೂಡಲೇ ಬಿಡಿಎ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಿಡಿಎ ಉತ್ತರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮೂವರು ಎಂಜಿನಿಯರ್‌ಗಳನ್ನು ಪ್ರಾಧಿಕಾರದ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಸರ್ಕಾರಿ ನಿಯಮದ ಪ್ರಕಾರ ಸಾಮಾನ್ಯ ನಿಯೋಜನಾ ಅವಧಿಯು ಗರಿಷ್ಠ 5 ವರ್ಷಗಳು ಎರವಲು ಸೇವೆಗೆ ಅವಕಾಶವಿದೆ. ಆ ನಂತರ ಎರವಲು ರದ್ದುಗೊಳಿಸಿ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಬೇಕೆಂಬ ಕಾನೂನು ಇದೆ. ಆದರೆ, ಎರವಲು ಸೇವೆಯಿಂದ ಬಿಡಿಎ ಸಹಾಯಕ ಎಂಜಿನಿಯರ್‌ಗಳಾದ ಸಿ.ವೀರಭದ್ರಯ್ಯ, ಎಸ್‌.ಹೆಂಜಾರಪ್ಪ, ರಾಜೇಶ್‌ ಎಸ್‌.ಅಗಡೀಕರ್‌ ಅವರನ್ನು ಬಿಡುಗಡೆ ಮಾಡಿದ್ದರೂ ಪುನಃ ಬಿಡಿಎನಲ್ಲಿ ಅಕ್ರಮವಾಗಿ ಮುಂದುವರೆದಿದ್ದಾರೆ.

ಕೂಡಲೇ ಮೂವರು ಎಂಜಿನಿಯರ್‌ಗಳನ್ನು ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ಲೋಕಾಯುಕ್ತಕ್ಕೆ ಅಕ್ರಮ ನಿಯೋಜನೆ ಕುರಿತು ದೂರು ನೀಡಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.