ಸಾರಾಂಶ
ಮಲ್ಲೇಶ್ ನಾಯಕನಹಟ್ಟಿಕನ್ನಡಪ್ರಭ ವಾರ್ತೆ ನಾಯಕನಹಟ್ಟಿ
ಗುಣಮಟ್ಟದ ಶೇಂಗಾ ಬೆಳೆಗೆ ಖ್ಯಾತಿ ಹೊಂದಿರುವ ನಾಯಕನಹಟ್ಟಿ ಹೋಬಳಿ ರೈತರು ಪ್ರಸಕ್ತ ವರ್ಷದಲ್ಲಿ ಅಧಿಕ ತೇವಾಂಶದಿಂದಾಗಿ ಗುಣಮಟ್ಟದ ಶೇಂಗಾ ಕೊರತೆ ಮತ್ತು ಇಳುವರಿ ಕುಸಿತದಿಂದಾಗಿ ಬೇಸತ್ತು ಹೋಗಿದ್ದಾರೆ.ಕಲ್ಲು ಮಿಶ್ರಿತ ಹೊಲಗಳಲ್ಲಿ ಮಾತ್ರ ಗುಣಮಟ್ಟದ ಗೆಜ್ಜೆ ಶೇಂಗಾ ಬೆಳೆಯಲು ಸಾಧ್ಯ. ಇಂತಹ ಉತ್ಕೃಷ್ಟ ಭೂಮಿ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ, ನಾಯಕನಹಟ್ಟಿ ಹೋಬಳಿ, ತಳಕು ಹೋಬಳಿಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಗಲಿನಲ್ಲಿ ಬಿಸಿಲು, ರಾತ್ರಿಯಲ್ಲಿ ಮಳೆ ಸುರಿದರೆ ಶೇಂಗಾ ಗುಣಮಟ್ಟ ಉತ್ಕೃಷ್ಟ ಎಂಬುದು ಇಲ್ಲಿನ ಅನುಭವ ಶೇಂಗಾ ಬೆಳೆಗಾರರಾದ ನೆಲಗೇತಲಹಟ್ಟಿಯ ನೆಲಗೇತಲಯ್ಯ, ಬೋರಯ್ಯ, ಗೋಪಾಲ ನಾಯಕರ ಅಭಿಪ್ರಾಯ.ಪ್ರಸಕ್ತ ಮುಂಗಾರು ಅವಧಿಯಲ್ಲಿ ಹಗಲು ಬಿಸಿಲು, ರಾತ್ರಿ ಮಳೆ ಹೆಚ್ಚಾಗಿತ್ತು. ಹಾಗಾಗಿ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಯಾಗಿರುವ 17 ಸಾವಿರ ಹೆಕ್ಟೇರ್ ನಲ್ಲಿ ಸೇಂಗಾ ಭರಪೂರ ಮೊಳಕೆಯೊಡೆದು ಬಯಲುಸೀಮೆ ಶೇಂಗಾ ಹಸಿರು ಹೊತ್ತು ಕಂಗೊಳಿಸಿತ್ತು. ಆದರೆ, ಇದೀಗ ಹಿಂಗಾರು ಎಡಬಿಡದೇ ಸುರಿಯುತ್ತಿರುವುದರಿಂದ ಶೇಂಗಾ ಬೆಳೆಗಾರರು ಗುಣಮಟ್ಟದ ಪೈರಿನ ಜತೆಗೆ ಇಳುವರಿ ಕುಂಠಿತ ಎದುರಿಸುವಂತಾಗಿದೆ.ಒಂದಷ್ಟು ಎತ್ತರ ಪ್ರದೇಶಗಳಲ್ಲಿ ಬಿತ್ತನೆ ಆಗಿರುವ ಶೇಂಗಾ ಬೆಳೆಗೆ ಅಧಿಕ ಮಳೆಯಿಂದ ಯಾವುದೇ ತೊಂದರೆ ಆಗಿಲ್ಲ. ಆದರೆ, ಸಮತಟ್ಟಾದ ಹಾಗೂ ತಗ್ಗು ಪ್ರದೇಶಗಳಲ್ಲಿ ಬೆಳೆ ಬೆಳೆದಿರುವ ರೈತರ ಹೊಲಗಳಲ್ಲಿ ಇಳುವರಿ ಕೈಕೊಟ್ಟಿದೆ. ಕೆಲವೊಂದು ರೈತರ ಹೊಲಗಳಲ್ಲಿ ಶೇಂಗಾ ಭರಪೂರ ಹುಲ್ಲುಗಾವಲಿನಂತೆ ಬೆಳೆ ಬಂದಿದೆ. ಆದರೆ, ಒಂದು ಅಡಿಯಿಂದ ಒಂದೂವರೆ ಅಡಿ ಬೆಳೆದಿರುವ ಶೇಂಗಾ ಗಿಡಗಳನ್ನು ಕಿತ್ತು ನೋಡಿದಾಗ ಒಂದೇ ಒಂದು ಶೇಂಗಾ ಕಾಯಿ ಕಟ್ಟಿಲ್ಲದಿರುವುದು ಕಂಡುಬರುತ್ತಿದೆ. ಇದು ಅತಿವೃಷ್ಟಿಯ ದುಷ್ಪರಿಣಾಮ ಎಂದು ರೈತರು ಪರಿತಪಿಸುತ್ತಿದ್ದಾರೆ.
ಮಟ್ಟಿ ಪ್ರದೇಶಗಳ ಹೊಲಗಳಲ್ಲಿ ಮಣ್ಣಿನ ಮೇಲ್ಭಾಗದಲ್ಲಿ ಸಣ್ಣ ಕಲ್ಲುಗಳ ರಾಶಿ ಇರುತ್ತದೆ. ಈ ಕಲ್ಲುಗಳ ರಾಶಿ ಶೇಂಗಾ ಗಿಡಗಳ ಬೇರುಗಳನ್ನು ರಕ್ಷಿಸುತ್ತವೆ. ಅಲ್ಲದೇ ಬಿಸಿಲಿಗೆ ಕಾದು ಅಧಿಕ ತೇವಾಂಶವನ್ನೂ ಹೀರುತ್ತವೆ. ಕಾವಲು ಬಸವೇಶ್ವರ, ಚನ್ನಬಸಯ್ಯನಹಟ್ಟಿ, ನೆಲಗೇತಲಹಟ್ಟಿ, ಬೋಸೇದೇವರಹಟ್ಟಿ, ಮಲ್ಲೂರಹಳ್ಳಿ, ಗೌಡಗೆರೆ, ಮಲ್ಲೋರಹಟ್ಟಿ, 14 ನೇ ಕಲ್ಲು ಗ್ರಾಮ ಭಾಗದಲ್ಲಿನ ಮಟ್ಟಿ (ಸಣ್ಣಗುಡ್ಡ ಪ್ರದೇಶ) ಪ್ರದೇಶಗಳ ಹೊಲಗಳಲ್ಲಿ ಇಳುವರಿ ಸುಧಾರಿಸಿದೆ.ಆದರೆ, ಉಳಿದ ಕಡೆಯೆಲ್ಲಾ ಸೇಂಗಾ ಕಾಯಿಕಟ್ಟದೇ ನೀರುಗಾಯಿಯೇ ಹೆಚ್ಚಾಗಿ ಕಂಡುಬರುತ್ತಿದೆ. ನಿರಂತರ ಬರಗಾಲದಿಂದ ಮತ್ತು ಅನಿಶ್ಚಿತ ಮಳೆಗಾಲದಿಂದಾಗಿ ಸಾಲಗಾರರಾಗಿಯೇ ಸೇಂಗಾ ಬೆಳೆಗಾರರು ಗ್ರಾಮಗಳ ತೊರೆದು ಕೃಷಿಯಿಂದ ವಿಮುಖರಾಗಿದ್ದರು. ಉತ್ತಮ ಮಳೆಯಿಂದಾಗಿ ಬಹುತೇಕ ರೈತರು ಊರುಗಳಿಗೆ ಮರಳಿ ಶೇಂಗಾ ಬಿತ್ತನೆ ನಡೆಸಿದ್ದರು. ಆದ್ದರಿಂದ ರೈತರಲ್ಲಿ ಶೇಂಗಾ ಅಧಿಕ ಇಳುವರಿ ಆಸೆ ಚಿಗುರಿತ್ತು. ಆದರೆ, ಅತಿವೃಷ್ಟಿ ರೈತರ ಈ ಒಂದು ಆಸೆಗೂ ತಣ್ಣೀರೆರಚಿದೆ.
ನೆಲಗೇತಲಹಟ್ಟಿ ರೈತ ಮಂಜುನಾಥ ಮಾಯನಾಡಿ, ಹಲವು ವರ್ಷ ಬಿತ್ತನೆಯೇ ಮಾಡಿಲ್ಲ. ಈ ಸಲ ಸಾಲ ಮಾಡಿ ಒಂದೂವರೆ ಎಕರೆ ಶೇಂಗಾ ಬಿತ್ತನೆ ನಡೆಸಿದ್ದೆ. ಆದರೆ ಈಗ ಅರ್ಧ ಇಳುವರಿಯೂ ಸಿಗಲ್ಲ. ಗಿಡವೊಂದಕ್ಕೆ ನಾಲ್ಕೈದು ಕಾಯಿಕಟ್ಟಿದೆ. ಅವೂ ಸಹ ಗಟ್ಟಿ ಇಲ್ಲ. ಚಿಂತೆ ಇಲ್ಲ. ಕನಿಷ್ಠ ದನಕರುಗಳಿಗೆ ಮೇವಾದರೂ ಸಿಕ್ಕಿತಲ್ಲ ಎಂಬ ಸಂತೋಷ ಇದೆ. ಈ ಹಿಂದೆ ದನಕರುಗಳನ್ನು ಬದುಕಿಸಿಕೊಳ್ಳಲು ಪರ ಜಿಲ್ಲೆಗಳಿಗೆ ಹೋಗಿ ಪರದಾಡಿದ್ದೆವು. ಈ ಸಲ ಅಂತಹ ತಾಪತ್ರಯ ಇಲ್ಲ ಎಂದು ಸಮಾಧಾನಪಟ್ಟುಕೊಂಡರು.-----ಕೋಟ್ -----
ಸವಳು ಮಿಶ್ರಿತ ಭೂಮಿಯಲ್ಲಿ ಇಳುವರಿ ಕಡಿಮೆವಿಳಂಬ ಮಾಡಿ ಬಿತ್ತನೆ ನಡೆಸಿರುವ ರೈತರ ಇಳುವರಿ ಸ್ವಲ್ಪ ಕುಸಿದಿದೆ. ಉಳಿದಂತೆ ಸಮಸ್ಯೆಗಳಿಲ್ಲ. ಅಧಿಕ ತೇವಾಂಶ ಪರಿಣಾಮ ಅಷ್ಟಾಗಿ ಬೀರಿಲ್ಲ. ಮಳೆ ನಿರಂತರ ಬಿದ್ದರೂ, ವಾತಾವರಣದಲ್ಲಿ ಉಷ್ಣಾಂಶ ಅಧಿಕ ಕಾಯ್ದುಕೊಂಡು ಬಂದಿದೆ. ಹಾಗಾಗಿ, ಇಳುವರಿ ಮೇಲೆ ಅಂತಹ ಪರಿಣಾಮ ಬೀರಲ್ಲ. ಸವಳು ಮಿಶ್ರಿತ ಭೂಮಿಯಲ್ಲಿ ಸಾಮಾನ್ಯವಾಗಿ ಇಳುವರಿ ಕಡಿಮೆ ಇರುತ್ತದೆ.- ಮಂಜುನಾಥ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ನಾಯಕನಹಟ್ಟಿ
-----ಸರ್ಕಾರ ಪರಿಹಾರ ಘೋಷಿಸಲಿ
ಅಧಿಕ ಮಳೆಯಿಂದಾಗಿ ಇಳುವರಿ ಕಳೆದುಕೊಂಡಿರುವ ರೈತರ ಪಟ್ಟಿಯನ್ನು ಕೃಷಿ ಇಲಾಖೆ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿ. ಜಿಲಾಧಿಕಾರಿಗಳು ಇಂತಹ ರೈತರ ಕೃಷಿ ನಷ್ಟವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು. ಸರ್ಕಾರ ಕೂಡ ಇಂತಹ ರೈತರಿಗೆ ಪರಿಹಾರ ಘೋಷಿಸಿದರೆ ರೈತರು ಕೃಷಿಯಿಂದ ವಿಮುಖರಾಗುವುದು ತಪ್ಪಿಸದಂತಾಗುತ್ತದೆ.- ನಾಗರಾಜ್ ಮೀಸೆ ಅಧ್ಯಕ್ಷ ರೈತ ಸಂಘ, ಹಸಿರು ಸೇನೆ