ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳು ಮಾರಾಟ ಮಾಡಿ ಉಳಿದ ಬಾಳೆ ಗಿಡಗಳು, ಮಾವಿನ ಸೊಪ್ಪು, ಬೂದು ಕುಂಬಳಕಾಯಿಗಳನ್ನು ರಸ್ತೆ ಬದಿಯೇ ಬಿಟ್ಟಿದ್ದಾರೆ. ನಗರದ ಟಿ.ಚೆನ್ನಯ್ಯ ರಂಗಮಂದಿರ, ಡಿ.ವಿ.ಜಿ. ಗ್ರಂಥಾಲಯ, ಮೆಥೋಡಿಸ್ಟ್ ಚರ್ಚ್ ಹಾಗೂ ಮೆಥೋಡಿಸ್ಟ್ ಶಾಲಾ ಕಾಲೇಜು, ಹಳೆ ಬಸ್ ನಿಲ್ದಾಣ ಮಾರ್ಗದಲ್ಲಿನ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಈ ರಸ್ತೆಯ ಪಕ್ಕದಲ್ಲೇ ನಗರಸಭೆ ಕಾರ್ಯಾಲಯ ಇದ್ದರೂ ಸಹ ಯಾವ ಜನಪ್ರತಿನಿಧಿಗಳಿಗೆ ಅಥವಾ ಅಧಿಕಾರಿಗಳಿಗೆ ಈ ಕಸದ ರಾಶಿ ಕಾಣದಿರುವುದು ಆಶ್ಚರ್ಯ. ನಗರದ ವಿವಿಧೆಡೆ ಕಸ ಸಂಗ್ರಹ
ಇದರ ಜೊತೆಗೆ ಕಳೆದ ೨ ದಿನಗಳಿಂದ ಬೀಳುತ್ತಿರುವ ಮಳೆಯಿಂದ ಇವುಗಳು ಕೊಳೆದು ದುರ್ವಾಸನೆ ಬೀರುತ್ತಿದ್ದು, ರೋಗಗಳು ಹರಡುವ ಸಾಧ್ಯತೆ ಇದೆ. ಇದೇ ರೀತಿ ನಗರದ ದೊಡ್ಡಪೇಟೆಯ ಚಾಂದಿನಿ ಚೌಕದಲ್ಲಿ ಹಾಗೂ ತರಕಾರಿ ಮಾರುಕಟ್ಟೆಯ ಹಿಂಬದಿ ರಸ್ತೆಗಳು ಇದೇ ರೀತಿ ಕಸದ ತ್ಯಾಜ್ಯ ರಾಶಿಗಳು ಕೊಳೆತು ನಾರುತ್ತಿದೆ.ಕೋಲಾರ ಜಿಲ್ಲೆಯ ಉಸ್ತುವಾರಿ ವಹಿಸಿರುವ ರಾಜ್ಯ ನಗರಾಭಿವೃದ್ದಿ ಯೋಜನೆ ಸಚಿವ ಬೈರತಿ ಸುರೇಶ್, ನಗರಸಭೆಯಲ್ಲಿ ಪೌರಾಯುಕ್ತರಿಲ್ಲದೆ ಕಳೆದ ಎರಡು ತಿಂಗಳಿಂದ ತಾತ್ಕಲಿಕ ಅಧಿಕಾರಿಗಳನ್ನು ನೇಮಿಸಿದ್ದಾರೆ. ಇಷ್ಟೇ ಅಲ್ಲದೆ ನಗರಸಭೆಯಲ್ಲಿ ಕನಿಷ್ಟ ಸಣ್ಣಪುಟ್ಟ ಕೆಲಸಗಳಿಗೆ ಸಾರ್ವಜನಿಕರು ತಿಂಗಳಾನುಗಟ್ಟಲೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಕೇಳಿದರೆ ಸಿಬ್ಬಂದಿಗಳ ಕೊರತೆ ಎಂಬ ರೆಡಿಮೇಡ್ ಉತ್ತರಸಿಗುತ್ತಿದೆ ಇದೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಯದ ವಿಷಯವೇನಲ್ಲ. ಆದರೆ ಸಚಿವರ ಇಚ್ಚೆ ಕೊರತೆಯಿಂದ ಕೋಲಾರ ಜಿಲ್ಲೆಯೂ ಅಭಿವೃದ್ದಿ ಕಾಣದಂತಾಗಿದೆ ಎಂದರೆ ತಪ್ಪಾಗಲಾಗುವುದಿಲ್ಲ.ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸೇವಾ ರಸ್ತೆಯ ಬದಿಗಳಲ್ಲಿ ಹೇಗೆ ಇದೆ ಎಂಬುದನ್ನು ಖುದ್ದಾಗಿ ಜಿಲ್ಲಾಧಿಕಾರಿ ಕೆಲ ತಿಂಗಳ ಹಿಂದೆ ಖುದ್ದಾಗಿ ಭೇಟಿ ನೀಡಿ ವೀಕ್ಷಿಸಿ, ತ್ಯಾಜ್ಯ ವಿಲೇವಾರಿಗೆ ಸೂಚಿಸಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ಜಿಲ್ಲಾಧಿಕಾರಿಗಳ ಸೂಚನೆ ಪಾಲನೆ ಮಾಡಿಲ್ಲ.
ಕಳೆದ ಎರಡು ದಿನಗಳಿಂದ ಎಡೆಬಿಡದೆ ಜಡಿ ಮಳೆ ಸುರಿಯುತ್ತಿರುವುದರಿಂದ ಒಳಚರಂಡಿಗಳಲ್ಲಿ ಕಸ ಬ್ಲಾಕ್ ಆಗಿರುವುದರಿಂದ ತ್ಯಾಜ್ಯ ನೀರು ಪ್ರಮುಖ ರಸ್ತೆಗಳಲ್ಲಿ ಹರಿಯುತ್ತಿರುವುದರಿಂದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಸಾರ್ವಜನಿಕರ ಮೇಲೆ ತ್ಯಾಜ್ಯ ನೀರಿನ ಅಭಿಷೇಕವಾಗುವುದರೊಂದಿಗೆ ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.