ಸಾರಾಂಶ
ಪ್ರವಾಸಿ ಕೇಂದ್ರವನ್ನು ಸ್ವಚ್ಛತೆ ಮಾಡುವುದರ ಜೊತೆಗೆ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಬೇಲೂರು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ ಹೇಳಿದರು. ಬೇಲೂರಿನ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಪೌರ ಕಾರ್ಮಿಕರ ದಿನ
ಬೇಲೂರು: ಪ್ರವಾಸಿ ಕೇಂದ್ರವನ್ನು ಸ್ವಚ್ಛತೆ ಮಾಡುವುದರ ಜೊತೆಗೆ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಬೇಲೂರು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ ಹೇಳಿದರು.
ಪಟ್ಟಣದ ಪುರಸಭಾ ಅವರಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ನಡೆದ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿ, ಪೌರಕಾರ್ಮಿಕರು ನಿತ್ಯ ಸ್ಚಚ್ಛತೆಗೆ ನೀಡುತ್ತಿರುವ ಕೊಡುಗೆ ಅಪಾರ. ಪೌರಕಾರ್ಮಿಕರಿಗೆ ಸಂಪೂರ್ಣ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು ಎಂಬ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ನೀಡುವ ಮೂಲಕ ಅವರ ಗೌರವ ಕಾಪಾಡಲು ಪುರಸಭೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಪೌರಕಾರ್ಮಿಕರ ಕಾಯಕ ನಿಷ್ಠೆ ಮತ್ತು ಕಾರ್ಯಪ್ರವೃತ್ತಿ ಮಹತ್ವಪೂರ್ಣವಾಗಿದೆ. ಪೌರಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳು ಸಮಪರ್ಕವಾಗಿ ಸಿಗುತ್ತಿಲ್ಲ, ಪೌರಕಾರ್ಮಿಕರಿಗೆ ನೀಡುವ ಸವಲತ್ತುಗಳಂತೆ ನೀರುಗಂಟಿಗಳಿಗೂ ನೀಡಬೇಕಿದೆ. ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು ಎಂದರು.
ಸದಸ್ಯರಾದ ಜಮಾಲ್ಲುದ್ದೀನ್ ಮತ್ತು ಬಿ.ಸಿ.ಜಗದೀಶ್ ಮಾತನಾಡಿ, ಪ್ರತಿನಿತ್ಯ ಬೆಳಿಗ್ಗೆ ಮಳೆ, ಚಳಿ ಎನ್ನದೆ ಪಟ್ಟಣದ ಸ್ವಚ್ಛತೆ ನಡೆಸುವ ಪೌರಕಾರ್ಮಿಕರು ಸೂರು ಇಲ್ಲದೆ ಪರದಾಡುತ್ತಿದ್ದಾರೆ. ಹೊರ ಗುತ್ತಿಗೆ ನೌಕರರ ಸಂಕಷ್ಟದಲ್ಲಿದ್ದಾರೆ. ಪೌರ ಕಾರ್ಮಿಕರ ಬಗ್ಗೆ ಜನತೆಗೆ ಇರುವ ಕೀಳರಿಮೆ ತೊರೆದು ಮನುಷ್ಯರಂತೆ ಕಾಣುವ ಸೌಜನ್ಯ ಬೆಳೆಸಿಕೊಳ್ಳಬೇಕಿದೆ ಎಂದರು.ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ನೀಡಲಾಯಿತು. ಈ ವೇಳೆ ಪೌರಕಾರ್ಮಿಕರನ್ನು ಅಭಿನಂದಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಸುಜಯ ಕುಮಾರ್, ಘನ ತ್ಯಾಜ್ಯ ಘಟಕದ ಅಧಿಕಾರಿ ಚಂದ್ರಶೇಖರ, ಉಪಾಧ್ಯಕ್ಷೆ ಉಷಾ ಸತೀಶ್, ಅಶೋಕ್, ಶ್ರೀನಿವಾಸ್, ಪ್ರಭಾಕರ್, ಸೌಮ್ಯ ಸುಬ್ರಮಣ್ಯ, ರತ್ನ ಸತ್ಯನಾರಾಯಣ, ಮೀನಾಕ್ಷಿ ವೆಂಕಟೇಶ್, ಸೌಭಾಗ್ಯ ಮತ್ತು ಹಿರಿಯ ಆರೋಗ್ಯ ನಿರೀಕ್ಷಕಿ ಜ್ಯೋತಿ, ಲೋಹಿತ್ ಇತರರು ಇದ್ದರು.