ಹಿರಿಯರ ಅಥ್ಲೆಟಿಕ್ಸ್‌: ಬಿ.ನಂಜೇಗೌಡಗೆ ಪ್ರಶಸ್ತಿ

| Published : Jan 16 2024, 01:47 AM IST / Updated: Jan 16 2024, 01:48 AM IST

ಸಾರಾಂಶ

ಸಾಧನೆಗೆ ವಯಸ್ಸು, ದೇಹಪ್ರಕೃತಿ, ಬಡತನ ಎಂದೂ ಅಡ್ಡಬರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಿಷಯ. ಸಾಧನೆ ಮಾಡುವ ಮನಸು ಎಲ್ಲರಿಗೂ ಇರುತ್ತದೆ. ಆದರೆ, ಸೂಕ್ತ ಶ್ರಮ, ಅವಕಾಶ ಸದ್ಬಳಕೆಯಲ್ಲಿ ಸೋಲುವವರೇ ಹೆಚ್ಚು. ಇಂಥ ಸಂದರ್ಭದಲ್ಲಿ ಭದ್ರಾವತಿಯ ಹಿರಿಯ ಕ್ರೀಡಾಪಟು ಬಿ.ನಂಜೇಗೌಡ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮೆರೆದು ಯುವಜನರಿಗೆ ಮಾದರಿ ಎನಿಸಿದ್ದಾರೆ.

ಭದ್ರಾವತಿ: ನಗರದ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ.ನಂಜೇಗೌಡ ಅವರು ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ.13 ಮತ್ತು 14ರಂದು ಆಯೋಜಿಸಲಾಗಿದ್ದ 42ನೇ ಸ್ಟೇಟ್ ಮಾಸ್ಟರ್ಸ್‌ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

75 ವರ್ಷ ಮೇಲ್ಪಟ್ಟವರ ವಿಭಾಗದ 100 ಮೀ. ಹರ್ಡಲ್ಸ್ ಹಾಗೂ 1500 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ 2.59 ಮೀಟರ್ ಗುರಿ ಸಾಧಿಸುವ ಮೂಲಕ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ಬಹುಮಾನ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಸ್ಟರ್ಸ್‌ ಅಸೋಸಿಯೇಷನ್ ವತಿಯಿಂದ ಜ.6 ಮತ್ತು 7ರಂದು ಹೊಸಕೋಟೆ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯ 75 ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ 400 ಮೀಟರ್ ಓಟದಲ್ಲಿ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ವಾನದೊಂದಿಗೆ ಪ್ರಶಸ್ತಿ ಪತ್ರ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ನಂಜೇಗೌಡ ಅವರು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ ಸುಮಾರು 45 ಪದಕಗಳನ್ನು ಪಡೆದುಕೊಂಡಿದ್ದಾರೆ.

- - - -ಡಿ15ಬಿಡಿವಿಟಿ1: ಬಿ.ನಂಜೇಗೌಡ