ಹಿರಿಯ ನಾಗರಿಕರು ಆತ್ಮವಿಶ್ವಾಸದಿಂದ ಜೀವನ ಸಾಗಿಸಿ

| Published : Dec 01 2024, 01:30 AM IST

ಸಾರಾಂಶ

ಅನಾರೋಗ್ಯದಿಂದ ದೇಹ ಮುಪ್ಪಾದರೆ ಚಿಂತೆಯಿಂದ ಮನಸ್ಸು ಮುಪ್ಪಾಗುತ್ತದೆ. ಕಾರಣ ಚಿಂತೆ ಬಿಟ್ಟು ಬದುಕುವುದನ್ನು ಕಲಿಯಬೇಕು

ಲಕ್ಷ್ಮೇಶ್ವರ: ಹಿರಿಯ ನಾಗರಿಕರು ಯಾರ ಮೇಲೂ ಅವಲಂಬಿತರಾಗದೆ ಆತ್ಮವಿಶ್ವಾಸದಿಂದ ಜೀವನ ಸಾಗಿಸಬೇಕು ಎಂದು ನಿವೃತ್ತ ಶಿಕ್ಷಕ ಸಾಹಿತಿ ಪೂರ್ಣಾಜಿ ಖರಾಟೆ ಹೇಳಿದರು.

ತಾಲೂಕು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ಎವರ್‌ಗ್ರೀನ್ ಮೆಲೋಡಿಸ್ ಹಾಗೂ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಇಲ್ಲಿನ ಬಾಳಿಕಾಯಿ ಅವರ ಮಿಲ್‌ನಲ್ಲಿ ನಡೆದ ಹಿರಿಯ ನಾಗರಿಕರ ಜನ್ಮದಿನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.

ಹಿರಿಯ ನಾಗರಿಕ ಡಿ.ಬಿ. ಬಳಿಗಾರ ಮಾತನಾಡಿ, ಅನಾರೋಗ್ಯದಿಂದ ದೇಹ ಮುಪ್ಪಾದರೆ ಚಿಂತೆಯಿಂದ ಮನಸ್ಸು ಮುಪ್ಪಾಗುತ್ತದೆ. ಕಾರಣ ಚಿಂತೆ ಬಿಟ್ಟು ಬದುಕುವುದನ್ನು ಕಲಿಯಬೇಕು ಎಂದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಜೀವನದಲ್ಲಿ ನಗು ಮುಖ್ಯ. ನಗು ನಗುತ್ತ ಇದ್ದರೆ ಬರುವ ಕಷ್ಟಗಳಿಗೆ ಸುಲಭದ ಪರಿಹಾರ ಸಿಗುತ್ತದೆ. ಯಾವಾಗಲೂ ಮುಖದ ಮೇಲೆ ಮಗುವಿನ ನಗೆ ಇರಲಿ. ನಗಲು ನಾಲ್ಕು ನರಗಳು ಸಾಕು.ಆದರೆ ಸಿಟ್ಟಿಗೇಳಲು ನಲವತ್ತು ನರಗಳು ಬೇಕು. ಹೀಗಾಗಿ ಎಲ್ಲರೂ ನಗುತ್ತ ಇರುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ನಾಗರಿಕರಿಗೆ ಸಂಘದಿಂದ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಸಂಘದಲ್ಲಿ ಮುನ್ನೂರಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಿರಿಯ ನಾಗಕರಿಗೆ ಇರುವ ಸೌಲಭ್ಯಗಳ ಕುರಿತು ತಿಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಆರ್.ಲಕ್ಕುಂಡಿಮಠ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಭೂಮಿ ಮೇಲೆ ಹುಟ್ಟಿ ಬಂದ ಮೇಲೆ ಕಷ್ಟ, ಸುಖ ಎಲ್ಲವೂ ಬರುವುದು ಸಹಜ. ಆದರೆ ಸುಖ ಸ್ವೀಕರಿಸಿದಂತೆ ಕಷ್ಟವನ್ನೂ ಸಹಿಸುವ ಗುಣ ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ನಿವೃತ್ತ ಶಿಕ್ಷಕಿ ಶಕುಂತಲಾ ಅಳಗವಾಡಿ ಮಾತನಾಡಿದರು. ಬಸವರಾಜ ಸಂಗಪ್ಪಶೆಟ್ಟರ ಹಿರಿಯ ನಾಗರಿಕರಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸುರೇಶ ರಾಚನಾಯ್ಕರ, ಚನ್ನಪ್ಪ ಕೋಲಕಾರ, ನೀಲಪ್ಪ ಕರ್ಜೆಕಣ್ಣವರ, ಕೆ.ಎಸ್. ಕುಲಕರ್ಣಿ, ಸಂಘದ ಗೌರವಾಧ್ಯಕ್ಷ ಹೇಮಗಿರಮಠ, ಡಾ. ಹೂವಿನ, ಮಹಾದೇವಪ್ಪ ಪಾತಾಳಿ, ಚಂದ್ರಣ್ಣ ಹೂಗಾರ, ನಾರಾಯಣಭಟ್ಟರು, ಅಲ್ತಾಫ್ ಹವಾಲ್ದಾರ, ಮಾಬು ಸೇರಿದಂತೆ ಮತ್ತಿತರರು ಇದ್ದರು.

ಸಿ.ಎಸ್. ಕೋಟಿಮಠ ನಿರೂಪಿಸಿದರು. ಕೊರಡೂರ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನ.೩೦ ಹುಟ್ಟಿದ ಏಳು ಹಿರಿಯ ನಾಗರಿಕರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವುದರ ಮೂಲಕ ಆಚರಿಸಲಾಯಿತು.

ಲಕ್ಷ್ಮೇಶ್ವರದ ಚಂಬಣ್ಣ ಬಾಳಿಕಾಯಿ ಅವರ ಡೆಕಾರ್ಟ್ಕೇಟಿಂಗ್ ಮಿಲ್‌ನಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲೂಕು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ಎವರ್‌ಗ್ರೀನ್ ಮೆಲೋಡಿಸ್ ಹಾಗೂ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತ ವತಿಯಿಂದ ಜರುಗಿದ ಹಿರಿಯ ನಾಗರಿಕರ ಜನ್ಮದಿನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಕೇಕ್ ಕತ್ತರಿಸುವುದರ ಮೂಲಕ ತಮ್ಮ ಜನ್ಮ ದಿನ ಆಚರಿಸಿಕೊಂಡರು.