ಚಿಕ್ಕಬಳ್ಳಾಪುರ: ಇಳಿ ವಯಸ್ಸಿನಲ್ಲಿ ನಿಯಮಿತವಾಗಿ ಆಹಾರ ಸೇವನೆ ಮಾಡುತ್ತಾ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ ಎಂದು ಮಕ್ಕಳ ತಜ್ಞ, ವೈದ್ಯಾಧಿಕಾರಿ ಡಾ. ರವಿಕುಮಾರ್ ಸಲಹೆ ನೀಡಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಮಾಹೆಗೊಮ್ಮೆ ಉಚಿತ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಾಯಾಮ, ವೈದ್ಯಕೀಯ ತಪಾಸಣೆ, ಸಾಕಷ್ಟು ನಿದ್ರೆ ಮತ್ತು ಮಾನಸಿಕ ನೆಮ್ಮದಿ ಇವುಗಳು ನೆಮ್ಮದಿಯ ಬದುಕಿಗೆ ಬಹು ಮುಖ್ಯ, ಸಾಂಪ್ರದಾಯಿಕ ಆಹಾರ ಯೋಗ ಮತ್ತು ಸಮಾಜದೊಂದಿಗೆ ಬೆರೆಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.ಸರ್ಕಾರಿ ನಿವೃತ್ತ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ. ಕೃಷ್ಣ ಮಾತನಾಡಿ, ಕಳೆದ 5 ವರ್ಷಗಳಿಂದ ಸರ್ಕಾರಿ ಕೆಲಸದಿಂದ ವಯೋ ನಿವೃತ್ತಿಯಾದ ನಮ್ಮ ಸಂಘದ ಸದಸ್ಯರಿಗಾಗಿ ಸಾಕಷ್ಟು ಆರೋಗ್ಯ ಸಲಹಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯದರ್ಶಿ ತಿರುಮಲಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಶ್ರೀನಿವಾಸ ರೆಡ್ಡಿ, ದಸ್ತಗೀರ್, ಜಯರಾಮರೆಡ್ಡಿ, ಹೈದರಾಲಿಖಾನ್, ನಾರಾಯಣಸ್ವಾಮಿ ಇದ್ದರು.