ಕನ್ನಡಪ್ರಭ ವಾರ್ತೆ ಕೋಲಾರಪ್ರಸಕ್ತ ಸಾಲಿನ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿಗೆ ಕೋಲಾರ ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ, ಪತ್ರಕರ್ತ, ಸಾಮಾಜಿಕ ಚಿಂತಕ, ಪ್ರಗತಿಪರ ಕೃಷಿಕರಾಗಿರುವ ಸಿ.ಎಂ.ಮುನಿಯಪ್ಪ ಆಯ್ಕೆಯಾಗಿದ್ದಾರೆ.ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೊಡ ಮಾಡುವ ಈ ಪ್ರಶಸ್ತಿಗೆ ಸಿ.ಎಂ.ಮುನಿಯಪ್ಪ ಸೇರಿದಂತೆ ಐದು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ೫ ಲಕ್ಷ ರು. ನಗದು ಹಾಗೂ ೨೦ ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದ್ದು, ಅಂಬೇಡ್ಕರ್ ಜಯಂತಿ ದಿನ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಪರಿಚಯ:ಕೋಲಾರ ತಾಲೂಕು ಚಿಕ್ಕಹಸಾಳ ಗ್ರಾಮದ ದೊಡ್ಡಮುನಿಸ್ವಾಮಿ ಹಾಗೂ ಹನುಮಕ್ಕ ದಂಪತಿ ಪುತ್ರರಾದ ಸಿ.ಎಂ.ಮುನಿಯಪ್ಪ, ತಮ್ಮ ೬೬ ವರ್ಷಗಳ ಜೀವನದಲ್ಲಿ ೫೦ ವರ್ಷವನ್ನು ಹೋರಾಟಕ್ಕಾಗಿಯೇ ಶ್ರಮಿಸಿ ರಾಜ್ಯಾದ್ಯಂತ ದಲಿತ ಚಳವಳಿಯ ಹಿರಿಯ ಹಾಗೂ ಪ್ರಮುಖ ಮುಖಂಡರೆನಿಸಿಕೊಂಡಿದ್ದಾರೆ.ದಲಿತ ಹೋರಾಟಗಾರರಾಗಿ ಮಾತ್ರವಲ್ಲದೆ, ಪತ್ರಕರ್ತರಾಗಿ, ಸಂಚಿಕೆ ಪತ್ರಿಕೆಯನ್ನು ಆರಂಭಿಸಿದ ಸಂಪಾದಕರಾಗಿ, ಬರಹಗಾರರಾಗಿ ಗುರುತಿಸಿಕೊಂಡಿರುವ ಸಿ.ಎಂ.ಮುನಿಯಪ್ಪ ಕೃಷಿ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಐದು ದಶಕಗಳ ದಲಿತ ಚಳವಳಿಯ ಬದುಕಿನಲ್ಲಿ ನಾಲ್ಕು ದಶಕಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಂಚಾಲಕರಾಗಿ ಮತ್ತು ರಾಜ್ಯ ಸಮಿತಿ ಸದಸ್ಯರಾಗಿ ನಿರಂತರವಾದ ಪ್ರಖರವಾದ ಹೋರಾಟಗಳಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದು, ಈಗ ಇತಿಹಾಸವಾಗಿದೆ.ಅವಿಭಜಿತ ಕೋಲಾರ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಪ್ರಮುಖ ದಲಿತ ಹೋರಾಟಗಳು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ, ಕೊಲೆ ಅತ್ಯಾಚಾರದಂತ ಬರ್ಬರ ಕೃತ್ಯಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ರೂಪಿಸುವುದರೊಂದಿಗೆ, ದಲಿತ ವಲಯದಲ್ಲಿ ಎಚ್ಚರ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.ದಲಿತರ ಶೈಕ್ಷಣಿಕ ಉನ್ನತಿ, ಸರಕಾರಿ ಸವಲತ್ತುಗಳನ್ನು ಸಮುದಾಯಕ್ಕೆ ತಲುಪಿಸುವ ನೂರಾರು ಪ್ರಯತ್ನಗಳ ಮೂಲಕ ದಲಿತ ಸಮುದಾಯದ ಸ್ವಾವಲಂಬಿ ಹಾಗೂ ಆತ್ಮಗೌರವ ಬದುಕಿಗಾಗಿ ವೈಯಕ್ತಿಕ ಬದುಕನ್ನು ಮುಡಿಪಾಗಿಟ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದಾರೆ.ಕೋಲಾರ ಜಿಲ್ಲಾ ಕೇಂದ್ರದಿಂದ ೧೯೯೪ರಲ್ಲಿ ಆರಂಭವಾದ ಮೂಡಲ ಸೀಮೆಯ ಸಂಚಿಕೆ ವಾರಪತ್ರಿಕೆಯ ಹಿಂದಿನ ರೂವಾರಿಯಾಗಿದ್ದ ಸಿ.ಎಂ.ಮುನಿಯಪ್ಪ ನಂತರದ ದಿನಗಳಲ್ಲಿ ಸಂಚಿಕೆ ಪತ್ರಿಕೆಯನ್ನು ಸಂಪಾದಕ ಪ್ರಕಾಶರಾಗಿ ದಿನಪತ್ರಿಕೆಯನ್ನಾಗಿ ರೂಪಿಸಿದ್ದಲ್ಲದೆ ದಲಿತರ ಪರವಾದ ನೈತಿಕ ಧ್ವನಿಯಾಗುವ ದಿಟ್ಟ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.ಸಿ.ಎಂ.ಮುನಿಯಪ್ಪರ ಹೋರಾಟ ಜೀವನದ ಸಮಾಜ ಸೇವೆಗಾಗಿ ಅನೇಕ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದು, ೨೦೧೫ ರಲ್ಲಿ ಮಾನವ ಬಂಧುತ್ವ ವೇದಿಕೆಯ ಬಿ.ಕೃಷ್ಣಪ್ಪ ಪ್ರಶಸ್ತಿ, ೨೦೧೫ ರಲ್ಲಿ ಪತ್ರಿಕಾ ರಂಗದ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ೨೦೧೬ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಮುಖವಾಗಿವೆ. ೨೦೨೩ ರ ಜುಲೈ ೪ ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ಪೀಕರಿಸಿದ್ದಾರೆ.ಇವೆಲ್ಲಾ ಹೋರಾಟಗಳ ಜೊತೆಯಲ್ಲಿಯೇ ಪ್ರಗತಿಪರ ರೈತರಾಗಿಯೂ ಗುರುತಿಸಿಕೊಂಡಿರುವ ಸಿ.ಎಂ.ಮುನಿಯಪ್ಪ ತಮ್ಮ ಹೋರಾಟದ ಬದುಕನ್ನು ದಲಿತ ಚಳವಳಿಯ ಇತಿಹಾಸದ ದಾಖಲೆಯನ್ನಾಗಿಸುವ ಪ್ರಯತ್ನದ ಭಾಗವಾಗಿ - ‘ಕಾಲಡಿಯ ಕಣ್ಣು’ - ಎಂಬ ಹೆಸರಿನಡಿ ಆತ್ಮಕಥೆ ಬರೆದಿದ್ದು, ಇದೇ ವರ್ಷ ಮೇ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.ಒಟ್ಟಾರೆ ಅಂಬೇಡ್ಕರ್ ಆಶಯಗಳ ಹಾದಿಯಲ್ಲಿಯೇ ಹೋರಾಟವನ್ನೇ ಬದುಕಾಗಿಸಿಕೊಂಡಿರುವ ಸಿ.ಎಂ.ಮುನಿಯಪ್ಪರಿಗೆ ರಾಜ್ಯ ಸರ್ಕಾರ ೨೦೨೬ ನೇ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ನೀಡುತ್ತಿರುವುದು ದಲಿತ ಚಳವಳಿಯನ್ನೇ ಗೌರವಿಸಿದಂತಾಗಿದೆ.
ಹಿರಿಯ ದಲಿತ ಹೋರಾಟಗಾರ ಸಿ.ಎಂ. ಮುನಿಯಪ್ಪರಿಗೆ ಅಂಬೇಡ್ಕರ್ ಪ್ರಶಸ್ತಿ
ಸಿ.ಎಂ.ಮುನಿಯಪ್ಪ, ತಮ್ಮ ೬೬ ವರ್ಷಗಳ ಜೀವನದಲ್ಲಿ ೫೦ ವರ್ಷವನ್ನು ಹೋರಾಟಕ್ಕಾಗಿಯೇ ಶ್ರಮಿಸಿ ರಾಜ್ಯಾದ್ಯಂತ ದಲಿತ ಚಳವಳಿಯ ಹಿರಿಯ ಹಾಗೂ ಪ್ರಮುಖ ಮುಖಂಡರೆನಿಸಿಕೊಂಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.