ಮಂಗಳೂರು ರೈಲ್ವೆ ಅಭಿವೃದ್ಧಿಗೆ 15 ದಿನದಲ್ಲಿ ಹಿರಿಯ ಅಧಿಕಾರಿಗಳ ಸಮಿತಿ ವರದಿ ಸಲ್ಲಿಕೆ

| Published : Jul 18 2024, 01:35 AM IST

ಮಂಗಳೂರು ರೈಲ್ವೆ ಅಭಿವೃದ್ಧಿಗೆ 15 ದಿನದಲ್ಲಿ ಹಿರಿಯ ಅಧಿಕಾರಿಗಳ ಸಮಿತಿ ವರದಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರ ಅನುಕೂಲಕ್ಕೆ ತಮಿಳ್ನಾಡು ರೈಲುಗಳನ್ನು ಕೊಲ್ಲೂರು ಮೂಕಾಂಬಿಕಾ ರೋಡ್‌ಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಕೇಂದ್ರಿತ ಅಭಿವೃದ್ಧಿ ಸಲುವಾಗಿ ನೈಋತ್ಯ, ಕೊಂಕಣ ಹಾಗೂ ದಕ್ಷಿಣ ರೈಲ್ವೆ ವಿಭಾಗಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಂತ್ರಿಕವಾಗಿ ಪರಿಶೀಲನೆ ನಡೆಸಿ 15 ದಿನಗಳಲ್ಲಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ರೈಲ್ವೆ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾದ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ, ಪ್ರತ್ಯೇಕ ರೈಲ್ವೆ ವಿಭಾಗದ ಕುರಿತಂತೆ ಜನಪ್ರತಿನಿಧಿಗಳು, ರೈಲ್ವೆ ಬಳಕೆದಾರರು ಹಾಗೂ ಸ್ಥಳೀಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ತಾಂತ್ರಿಕವಾಗಿ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತಾದ ವರದಿಯನ್ನು ನೀಡಬೇಕು ಎಂದು ಸಚಿವರು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದಲ್ಲಿ 1,924 ಕೋಟಿ ರು. ವೆಚ್ಚದಲ್ಲಿ 59 ರೈಲು ನಿಲ್ದಾಣಗಳ‍ನ್ನು ಆಧುನೀಕರಣಗೊಳಿಸಿ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ. ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೇ ಠಾಣೆಯನ್ನು 1,000 ಕೋಟಿ ರು.ಗಳಲ್ಲಿ ವಿಶ್ವಕ್ಕೆ ಮಾದರಿಯಾಗಿ, ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ ಎಂದರು.

ಬೆಂಗಳೂರು ರೈಲು ನಿಲ್ದಾಣದಲ್ಲಿ ಸಚಿವರ ಕಚೇರಿ: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನನ್ನ ಕಚೇರಿ ತೆರೆದು ವಾರದಲ್ಲಿ ಒಂದು ದಿನ ಸಾರ್ವಜನಿಕರಿಗೆ ಲಭ್ಯವಿರಲು ನಿರ್ಧರಿಸಿದ್ದೇನೆ. ಇದರಿಂದಾಗಿ ಸಾರ್ವಜನಿಕರಿಗೆ ರೈಲಿನ ಕುಂದುಕೊರತೆ ತಿಳಿಸಲು ಅನುಕೂಲವಾಗಲಿದೆ ಎಂದರು.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು 321 ಕೋಟಿ ರು.ಗಳಲ್ಲಿ ವಿಶ್ವದರ್ಜೆಗೆ ಏರಿಸುವ ಕಾಮಗಾರಿಗೆ ಡಿಸೆಂಬರ್‌ನಲ್ಲಿ ಚಾಲನೆ ಸಿಗಲಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭಕ್ತರ ಅನುಕೂಲಕ್ಕೆ ತಮಿಳ್ನಾಡು ರೈಲುಗಳನ್ನು ಕೊಲ್ಲೂರು ಮೂಕಾಂಬಿಕಾ ರೋಡ್‌ಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಶಾಸಕರಾದ ವೇದವ್ಯಾಸ್‌ ಕಾಮತ್‌, ಹರೀಶ್‌ ಪೂಂಜಾ, ಭಾಗೀರಥಿ, ವಿಧಾನ ಪರಿಷತ್‌ ಸದಸ್ಯ ಡಾ. ಮಂಜುನಾಥ ಭಂಡಾರಿ, ಶಾಸಕ ಡಾ.ಭರತ್‌ ಶೆಟ್ಟಿ ಪರವಾಗಿ ಪಾಲಿಕೆ ಸದಸ್ಯ ವರುಣ್‌ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಧರ್ಮ, ರೈಲ್ವೆ ಬಳಕೆದಾರರ ಪರವಾಗಿ ಹನುಮಂತ ಕಾಮತ್‌, ಜಿ.ಕೆ. ಭಟ್‌, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮೊದಲಾದವರು ವಿವಿಧ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್‌ ಶ್ರೀವಾಸ್ತವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಮತ್ತಿತರರಿದ್ದರು. ಕೊಂಕಣ ರೈಲ್ವೆ ವಿಲೀನ ಅತ್ಯಗತ್ಯ: ಕ್ಯಾ. ಬ್ರಜೇಶ್‌ ಚೌಟಮಂಗಳೂರಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ರೈಲ್ವೆ ವಿಭಾಗಗಳು ಒಳಗೊಂಡಿರುವುದರಿಂದ ಅಭಿವೃದ್ಧಿಗೆ ಸಂಬಂಧಿಸಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಗಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆಗೆ ವಿಲೀನಗೊಳಿಸುವುದು ದ.ಕ. ಜಿಲ್ಲೆ ಮಾತ್ರವಲ್ಲದೆ ಕರಾವಳಿ ಕರ್ನಾಟಕದ ಹಿತಾಸಕ್ತಿಯಿಂದಲೂ ಅತೀ ಅಗತ್ಯ ಎಂದು ದ.ಕ. ಸಂಸದ ಕ್ಯಾ. ಬ್ರಜೇಶ್‌ ಚೌಟ ಅವರು ಸಚಿವರ ಗಮನ ಸೆಳೆದರು.

ಸುರತ್ಕಲ್‌, ಮೂಲ್ಕಿ ರೈಲು ನಿಲ್ದಾಣದ ಜಂಕ್ಷನ್‌ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ರೋರೋ ಸರ್ವಿಸ್‌ ಸುರತ್ಕಲ್‌ನಿಂದ ತೋಕೂರು ಸ್ಟೇಷನ್‌ಗೆ ಸ್ಥಳಾಂತರಿಸಬೇಕು ಎಂದು ಸಂಸದರು ಮನವಿ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಬೇಡಿಕೆಯನ್ನು ಮುಂದಿಟ್ಟರು.

ಪ್ರತಿ 3 ತಿಂಗಳಿಗೊಮ್ಮೆ ಮಂಗ್ಳೂರಲ್ಲಿ ಸಭೆ:

ಕೊಂಕಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂತೋಷ್‌ ಕುಮಾರ್‌ ಮಾತನಾಡಿ, ನಮ್ಮ ವಿಭಾಗ ಈಗಾಗಲೇ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸುತ್ತಿದೆ. ಮುಂದೆ ಸಂಸದರು, ಶಾಸಕರನ್ನು ಒಳಗೊಂಡು ಆಗಸ್ಟ್‌ನಿಂದಲೇ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಜು.20ರಂದು ಮೊದಲ ಸಭೆ ನಡೆಯಲಿದೆ ಎಂದರು.

ವಿಶ್ವದರ್ಜೆ ನಿಲ್ದಾಣ ಕಾಮಗಾರಿ ಶೀಘ್ರ

ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು 300 ಕೋಟಿ ರು.ಗಳಲ್ಲಿ ವಿಶ್ವದರ್ಜೆಯ ರೈಲ್ವೆ ಕೇಂದ್ರವನ್ನಾಗಿಸಲು ಪ್ರಕ್ರಿಯೆಗಳು ನಡೆಯುತ್ತಿದ್ದು, 6 ತಿಂಗಳಲ್ಲಿ ಟೆಂಡರ್‌ ಆಗಿ, ಮುಂದಿನ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಮೂರು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್‌.ಎನ್‌.ಸಿಂಗ್‌ ತಿಳಿಸಿದರು.ಬೆಂಗಳೂರಿಗೆ ಹೈಸ್ಪೀಡ್‌ ರೈಲುಎನ್‌ಎಂಪಿಟಿ, ಕೆಸಿಸಿಐ ಮತ್ತು ರಾಜ್ಯದ ಆರ್ಥಿಕತೆಯ ದೃಷ್ಟಿಯಿಂದ ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರನ್ನು ರೈಲಿನಲ್ಲಿ ಸಂಪರ್ಕಿಸಲು ಪ್ರಸಕ್ತ 11 ಗಂಟೆಗಳು ಬೇಕು. ಸಮಯ ಕಡಿತಗೊಳಿಸುವ ಸಲುವಾಗಿ ಹೈಸ್ಪೀಡ್‌ ರೈಲು ಸಂಪರ್ಕ ಕಲ್ಪಿಸಲು ಸಾಧ್ಯತೆ ಹಾಗೂ ಆರ್ಥಿಕ ಅಧ್ಯಯನ ಆಗಬೇಕು. ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ರಯಾಣಿಕ ರೈಲು ಪುನರಾರಂಭಿಸಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.

ರೈಲ್ವೆ ಅಧಿಕಾರಿಗಳಿಗೆ ಕನ್ನಡ ಕಲಿಯಲು ಸೂಚನೆ

ರೈಲ್ವೆ ಇಲಾಖೆಯ ಅಧಿಕಾರಿಗಳು ಕನ್ನಡ ಕಲಿಯಬೇಕು ಎಂದು ಸೂಚನೆ ನೀಡಿದ ಸಚಿವ ವಿ. ಸೋಮಣ್ಣ, ನಾನು ಕೂಡಾ ಹಿಂದಿ ಭಾಷೆ ಓದಲು ಮತ್ತು ಬರೆಯಲು ಕಲಿಯುತ್ತಿದ್ದು, ಆರು ತಿಂಗಳಲ್ಲಿ ಕಾಗದ ಬರೆಯುವ ಜತೆಗೆ ಸಂಸತ್ತಿನಲ್ಲಿ ಹಿಂದಿಯಲ್ಲಿ ಮಾತನಾಡಲು ಸಿದ್ಧನಾಗುತ್ತಿದ್ದೇನೆ ಎಂದರು.

ಉಡುಪಿಯಲ್ಲಿ ಆ.16 ಅಥವಾ 17ರಂದು ಸಭೆಸಂಸದ ಕೋಟ ಶ್ರೀನಿವಾಸ ಪೂಜಾರಿಯವರೂ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಬೇಡಿಕೆಯನ್ನು ಮುಂದಿಟ್ಟರಲ್ಲದೆ, ಉಡುಪಿ ಕುಂದಾಪುರ ಭಾಗದ ರೈಲ್ವೆ ವಿಚಾರ ಚರ್ಚಿಸಲು ಆ.16 ಅಥವಾ 17ರಂದು ಸಭೆ ನಡೆಸುವಂತೆ ಕೋರಿಕೊಂಡರು. ಅದಕ್ಕೆ ಉತ್ತರಿಸಿದ ಸಚಿವ ಸೋಮಣ್ಣ ಆ ಕುರಿತು ದಿನ ನಿಗದಿಪಡಿಸಿ ಚರ್ಚಿಸಲು ಸಿದ್ಧ ಎಂದರು.

ಸಂಸದ ಚೌಟ ಬಗ್ಗೆ ಸೋಮಣ್ಣ ಶ್ಲಾಘನೆ

ಕಳೆದ ಒಂದು ತಿಂಗಳಿನಿಂದ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು ನನ್ನ ಗಮನಕ್ಕೆ ಇವುಗಳನ್ನು ತಂದಿದ್ದು ಪದೇ ಪದೇ ಸಭೆ ನಡೆಸುವಂತೆ ಕೇಳುತ್ತಲೇ ಬಂದಿದ್ದಾರೆ. ಈ ವಿಚಾರದಲ್ಲಿ ಸಾಕಷ್ಟು ಅಧ್ಯಯನ ನಡೆಸಿ ಅಧಿಕಾರಿಗಳನ್ನು ಒಟ್ಟಾಗಿಸಿದ್ದಾರೆ. ಯುವ ಸಂಸದರ ಈ ಪ್ರಯತ್ನಕ್ಕೆ ನಾನು ಪ್ರೋತ್ಸಾಹ ಕೊಡಬೇಕಾದ್ದು ಕರ್ತವ್ಯ ಎಂದು ಸಚಿವ ಸೋಮಣ್ಣ ಈ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು.