ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಿರಿಯ ವಿದ್ಯಾರ್ಥಿಗಳು ತಾವು ಓದಿ ಶಾಲೆಗಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕು ಎಂದು ಮೈಸೂರು ಡಯಟ್ ಹಿರಿಯ ಉಪನ್ಯಾಸಕ ಚಂದ್ರಶೇಖರ್ ಹೇಳಿದರು.ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ನಡೆದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾರಾಯಣಪುರ ಪ್ರೌಢಶಾಲೆಗೆ ಶಿಕ್ಷಕನಾಗಿ ಬಂದಾಗ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಿದ್ದ ಅಗತ್ಯ ಸೌಕರ್ಯಗಳ ಕೊರತೆ ಇತ್ತು. ಫಲಿತಾಂಶವು ಸಹ ಕಡಿಮೆ ಇತ್ತು. ಆ ನಂತರ ಎಲ್ಲಾ ಶಿಕ್ಷಕರ ಪರಿಶ್ರಮದಿಂದ ಶಾಲೆ ಫಲಿತಾಂಶ ಹೆಚ್ಚಾಯಿತು ಎಂದರು.
ಇದೀಗ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಿರುವ ಅಗತ್ಯ ಸೌಕರ್ಯ ಸರ್ಕಾರ ನೀಡಿದೆ. ಅವುಗಳನ್ನು ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧನೆ ಮಾಡಬೇಕು. ಇಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಈಗ ಉನ್ನತ ಸ್ಥಾನದಲ್ಲಿದ್ದಾರೆ. ಎಲ್ಲರೂ ಶಾಲೆ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದರು.ನಿವೃತ್ತ ಶಿಕ್ಷಕ ಗಂಗಾಧರ್ ಮಾತನಾಡಿ, ನಾವು ಓದುತ್ತಿದ್ದ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಅಗತ್ಯ ಸೌಕರ್ಯಗಳು ಇರಲಿಲ್ಲ. ಪ್ರಾಥಮಿಕ, ಪ್ರೌಢಶಿಕ್ಷಣಕ್ಕಾಗಿ ನಾಲ್ಕೈದು ಮೈಲಿ ನಡೆದುಕೊಂಡು ಹೋಗಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಲವು ಸೌಕರ್ಯ ಒದಗಿಸಿಕೊಟ್ಟಿದೆ. ಮೋಸದ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯರೂಪಿಸಿಕೊಳ್ಳಬೇಕು ಎಂದರು.
ಶಿಕ್ಷಕ ರಾಜು ಮಾತನಾಡಿ, ಒತ್ತಡ ದಿನಗಳಲ್ಲಿ ವಿದ್ಯಾರ್ಥಿಗಳು ಜತೆಗೂಡಿ ಎಲ್ಲರನ್ನು ಒಗ್ಗೂಡಿಸಿ ಸನ್ಮಾನಿಸುತ್ತಿರುವುದಕ್ಕೆ ಶಿಕ್ಷಕರಿಗೆ ಹೃದಯ ತುಂಬಿಬಂದಿದೆ ಎಂದು ಬಣ್ಣಿಸಿದರು.ಇದೇ ವೇಳೆ ಶಾಲೆ ಹಿರಿಯ ಶಿಕ್ಷಕರಾದ ಗಂಗಾಧರ್, ಚಂದ್ರಶೇಖರ್, ರಾಜು, ನಾಗೇಶ್, ಮಹಮದ್ ಇಲಿಯಾಜ್, ಸುಜಾತ, ವೆಂಕಟಲಕ್ಷ್ಮಿ, ಭಾನುಮತಿ, ಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ಕಾರ್‍ಯಕ್ರಮಕ್ಕೂ ಮುನ್ನ ನಾರಾಯಣಪುರ ಸರ್ಕಲ್‌ನಿಂದ ಎಲ್ಲಾ ಶಿಕ್ಷಕರನ್ನು ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಯಿತು.
ಈ ವೇಳೆ ಶಾಲೆ ಮುಖ್ಯಶಿಕ್ಷಕಿ ವಿದ್ಯಾಶ್ರೀ, ಯತೀಂದ್ರಕುಮಾರ್, ದರ್ಶನ್, ಹಿರಿಯ ವಿದ್ಯಾರ್ಥಿಗಳಾದ ಯಧುರಾಜ್, ಕೆ.ಪಿ.ಯೋಗಣ್ಣ, ಪುಟ್ಟರಾಜು, ಪರಮೇಶ್, ಜಿ.ಯೋಗ, ರವಿ ಸೇರಿದಂತೆ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಇದ್ದರು.