ಸಾರಾಂಶ
ನಮ್ಮ ಹಿರಿಯರು ಉತ್ತಮ ಆಶಯಗಳೊಂದಿಗೆ ಜನರ ಆರೋಗ್ಯಕ್ಕಾಗಿ ಪ್ರತಿ ಗ್ರಾಮದಲ್ಲಿ ಅರಳಿಕಟ್ಟೆ ಮತ್ತು ಬೇವಿನ ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಅಲ್ಲದೆ ಹೊಲಗದ್ದೆಗಳ ಅಂಚಿನಲ್ಲಿ ಹತ್ತು ಹಲವು ಗಿಡಗಳನ್ನು ನೆಟ್ಟು ತಮಗೆ ಅರಿವಿಲ್ಲದಂತೆ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಸಕ್ಕರೆನಾಡು ರೈತ ಉತ್ಪಾದಕರ ಕಂಪನಿ, ಜಲಾನಯನ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಾಲನೆ ನೀಡಿ ಮಾತನಾಡಿ, ನಮ್ಮ ಹಿರಿಯರು ಉತ್ತಮ ಆಶಯಗಳೊಂದಿಗೆ ಜನರ ಆರೋಗ್ಯಕ್ಕಾಗಿ ಪ್ರತಿ ಗ್ರಾಮದಲ್ಲಿ ಅರಳಿಕಟ್ಟೆ ಮತ್ತು ಬೇವಿನ ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಅಲ್ಲದೆ ಹೊಲಗದ್ದೆಗಳ ಅಂಚಿನಲ್ಲಿ ಹತ್ತು ಹಲವು ಗಿಡಗಳನ್ನು ನೆಟ್ಟು ತಮಗೆ ಅರಿವಿಲ್ಲದಂತೆ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯಿಂದ ಮರಗಳನ್ನು ಕಡಿದು ಪರಿಸರ ನಾಶ ಮಾಡುವುದರೊಂದಿಗೆ ಮುಂದಿನ ಪೀಳಿಗೆಯ ಬದುಕನ್ನು ನಾಶ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ರೈತರು ಮತ್ತು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಗ್ರಾಮಗಳ ಪರಿಮಿತಿಯಲ್ಲಿ ಕನಿಷ್ಠ ಒಂದು ಸಾವಿರ ಗಿಡಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸುವುದರ ಮೂಲಕ ಹಸಿರೀಕರಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಅಶೋಕ್ ಸಲಹೆ ನೀಡಿದರು.ಸಕ್ಕರೆ ನಾಡು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಸಿ.ಮಹೇಂದ್ರ ಮಾತನಾಡಿ, ಶಾಲೆ ಆವರಣದಲ್ಲಿ ಕನಿಷ್ಠ 500 ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ತಾಪಂ ಇಒ ಮಂಜುನಾಥ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮಂಜುನಾಥ, ಗ್ರಾಪಂ ಅಧ್ಯಕ್ಷೆ ಸುವರ್ಣ, ಸದಸ್ಯ ಜಿ.ಸಿ. ಹರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮಹದೇವು, ಮುಖಂಡರಾದ ಕಾರಸವಾಡಿ ಮಹದೇವು, ಮಹೇಶ್ ಚಂದ್ರ ಗುರು, ಬೋರಾಪುರ ಶೇಖರ್, ಕುದುರುಗುಂಡಿ ಹರೀಶ, ಶಿವರಾಮ, ಕಂಪನಿಯ ಸಿಇಒ ಕಾವ್ಯ, ಪಿಡಿಒ ವೆಂಕಟೇಶ್ ಹಾಗೂ ಶಾಲೆಯ ಶಿಕ್ಷಕರು ಇದ್ದರು.