ಮಲೇರಿಯ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ವೆಂಕಟೇಶ

| Published : Jun 09 2024, 01:38 AM IST

ಸಾರಾಂಶ

ಹುಣಸಗಿ ಪಟ್ಟಣದ 16 ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಣ ಹಾಗೂ ಮಲೇರಿಯಾ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ನೀರು ನಿಲ್ಲುವ ಜಾಗಗಳು ಸೊಳ್ಳೆಗಳ ಆವಾಸ ಸ್ಥಾನ. ಕಾರಣ ಎಲ್ಲಿಯೂ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಲೇರಿಯಾ ಹರಡದಂತೆ ನಾಗರಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ಹೇಳಿದರು.

ಪಟ್ಟಣದ 16 ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಣ ಹಾಗೂ ಮಲೇರಿಯಾ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಸಾರ್ವಜನಿಕರು ತಾವು ವಾಸವಿರುವ ಪ್ರದೇಶದಲ್ಲಿ ನೀರು, ಕಸ, ತಾಜ್ಯ, ಸಂಗ್ರಹವಾಗದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಉತ್ತಮ ಮಳೆ ಆಗುತ್ತಿದ್ದು, ಈ ಸಂದರ್ಭದಲ್ಲಿ ತೊಟ್ಟಿ, ಚರಂಡಿ ಹಾಗೂ ಇನ್ನಿತರ ಘನ ತ್ಯಾಜ್ಯಗಳಲ್ಲಿ ನೀರು ಶೇಖರಣೆಯಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ಡೆಂಘೀ, ಮಲೇರಿಯಾ ನಂತಹ ರೋಗಗಳು ಕಂಡು ಬರುವ ಸಂಭವ ಹೆಚ್ಚಿದ್ದು, ಡೆಂಘೀ ಮಲೇರಿಯಾ ರೋಗವನ್ನು ನಿಯಂತ್ರಿಸಲು ಮುಂಜಾಗ್ರತೆ ವಹಿಸಲು ತಿಳಿಸಿದರು.

ಕೆಬಿಜೆಎನ್ಎಲ್ ಆರೋಗ್ಯ ನಿರೀಕ್ಷಣಾಧಿಕಾರಿ ಅಜಯಕುಮಾರ ಎಂ.ಬಿ. ಮಾತನಾಡಿ, ಆರೋಗ್ಯ ಅಧಿಕಾರಿಗಳ ಸಲಹೆಯಂತೆ ಪ್ರತಿ ಮನೆ ಮನೆಗೆ ಮತ್ತು ಪ್ರತಿ ಕಾಲೊನಿಗಳಿಗೂ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗೋಣ ಎಂದರು.ಮನೆಯ ಸುತ್ತಮುತ್ತಲಿನ ಗುಂಡಿಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆದ್ದರಿಂದ ಮನೆಯ ಒಳಾಂಗಣದ ನೀರಿನ ತಾಣಗಳಾದ ಡ್ರಮ್, ನೀರಿನ ತೊಟ್ಟಿಗಳು, ಬ್ಯಾರಲ್‌ಗಳನ್ನು ವಾರಕ್ಕೆ ಮೂರು ಬಾರಿ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ಶೇಖರಿಸಿಕೊಳ್ಳಬೇಕು. ಹೊರಾಂಗಣ ನೀರಿನ ತಾಣಗಳಾದ ಹೂಕುಂಡಗಳು, ಒಡೆದ ಬಾಟಲ್ ಗಳು, ಎಳೆ ನೀರಿನ ಬುರುಡೆಗಳು, ಎಸೆದ ಪಾಸ್ಟಿಕ್‌ಗಳು, ಟೈರಗಳು, ಮಡಿಕೆಗಳು ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಸೂಕ್ತ ರೀತಿಯಲ್ಲಿ ಕಾಲ ಕಾಲಕ್ಕೆ ವಿಲೇವಾರಿ ಮಾಡಬೇಕು. ಇದರಿಂದ ಸೊಳ್ಳೆಗಳ ಉತ್ಪಾದನೆ ತಡೆಯಬಹುದು ಎಂದರು.

ಅಜಯಕುಮಾರ ಎಂ.ಬಿ., ಶಿವಕುಮಾರ, ಮಲ್ಲಿಕಾರ್ಜುನ ಯಾಳಗಿ ಸೇರಿದಂತೆ ಇತರರಿದ್ದರು.ಹುಣಸಗಿ ಪಟ್ಟಣ ಪಂಚಾಯ್ತಿ ವತಿಯಿಂದ 16 ವಾರ್ಡ್ ಗಳಲ್ಲಿ ಚರಂಡಿ ಹಾಗೂ ಕಲುಷಿತ ನೀರು ಇರುವ ಕಡೆಯಲ್ಲಿ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

- ವೆಂಕಟೇಶ ತೆಲಂಗ, ಪಟ್ಟಣ ಪಂಚಾಯ್ತಿ ಅಧಿಕಾರಿ, ಹುಣಸಗಿ.