ಯುವಜನತೆ ಸಾಧನೆ ಮನೋಭಾವ ಬೆಳೆಸಿಕೊಳ್ಳಬೇಕು: ಆರ್ .ಬಿ.ಪದ್ಮನಾಭ ಕರೆ

| Published : Jun 09 2024, 01:38 AM IST

ಯುವಜನತೆ ಸಾಧನೆ ಮನೋಭಾವ ಬೆಳೆಸಿಕೊಳ್ಳಬೇಕು: ಆರ್ .ಬಿ.ಪದ್ಮನಾಭ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಪದವಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾದ್ದರಿಂದ ವಿದ್ಯಾರ್ಥಿಗಳು ಮೊಬೈಲ್, ಫೇಸ್‌ಬುಕ್, ವ್ಯಾಟ್ಸಫ್ ಚಾಟಿಂಗ್ ಮಾಡಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡದೇ ಏಕಾಗ್ರತೆಯಿಂದ ಪುಸ್ತಕಗಳನ್ನು ಅಭ್ಯಾಸ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್ .ಪೇಟೆ

ಯುವಜನರು ಸಾಧನೆ ಮಾಡುವ ಮನೋಭಾವನೆ ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆರ್.ಬಿ.ಪದ್ಮನಾಭ ಕರೆ ನೀಡಿದರು.

ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಯುವಜನರು ಹಾಗೂ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗದ ಮೂಲಕ ಗುರಿ ಸಾಧನೆ ಮಾಡಬೇಕು ಎಂದರು.

ಪದವಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾದ್ದರಿಂದ ವಿದ್ಯಾರ್ಥಿಗಳು ಮೊಬೈಲ್, ಫೇಸ್‌ಬುಕ್, ವ್ಯಾಟ್ಸಫ್ ಚಾಟಿಂಗ್ ಮಾಡಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡದೇ ಏಕಾಗ್ರತೆಯಿಂದ ಪುಸ್ತಕಗಳನ್ನು ಅಭ್ಯಾಸ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಓದಿನ ಮೂಲಕ ಸಾಧನೆ ಮಾಡಿ ತಂದೆ- ತಾಯಿ ಹಾಗೂ ಗುರು- ಹಿರಿಯರಿಗೆ ಕೀರ್ತಿ ತರಬೇಕು. ವಿದ್ಯೆ ಜ್ಞಾನದ ಬೆಳಕು. ಈ ಶಕ್ತಿಯನ್ನು ಯಾರೂ ಕದಿಯಲಾಗದು. ಶಿಕ್ಷಣಕ್ಕೆ ಒತ್ತು ನೀಡಿ ಸಾಧನೆ ಮಾಡಿ ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಮ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಚಂಚಲ ಮಾಡಿಕೊಂಡು ಏಕಾಗ್ರತೆಗೆ ಭಂಗ ತಂದುಕೊಳ್ಳದೆ ಕಷ್ಟಪಟ್ಟು ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಕಾಲೇಜಿನ ಉಪನ್ಯಾಸಕಿ ಶೃತಿ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು, ವಿದ್ಯಾರ್ಥಿಗಳ ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ನೆನಪಿನ ಕಾಣಿಕೆಯೊಂದಿಗೆ ಬೀಳ್ಕೊಟ್ಟರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.