ಪಠ್ಯದ ಜತೆಗೆ ಪಠ್ಯೇತರವೂ ಮುಖ್ಯ

| Published : Jun 09 2024, 01:38 AM IST

ಸಾರಾಂಶ

ಗುಂಡ್ಲುಪೇಟೆ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಈ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪದಲ್ಲಿ ಮೈಸೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗು೦ಡ್ಲಪೇಟೆ

ವಿದ್ಯಾರ್ಥಿ ಜೀವನ ಚಿನ್ನದಂತೆ, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ವೆಂಕಟೇಶ್ ಸಲಹೆ ನೀಡಿದರು.ಪಟ್ಟಣದ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ನಡೆದ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ೨೦೨೩-೨೪ ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪದಲ್ಲಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಗೆಲಲ್ಲಿ, ಸೋಲಲಿ ಅದು ಜೀವನದ ಕೊನೆ ತನಕ ನೆನಪಿನಲ್ಲಿ ಉಳಿಯುತ್ತದೆ ಎಂದರು. ವಿದ್ಯಾರ್ಥಿಯ ಜೀವನ ಹೆಬ್ಬಾವಿನಂತೆ ಇರಬಾರದು, ಜೇನು ನೊಣದಂತೆ ಇರಬೇಕು. ಹೆಬ್ಬಾವು ಒಂದು ಬಾರಿ ಆಹಾರ ಸೇವನೆ ಮಾಡಿ ಮಲಗಿದರೇ, ಆರು ತಿಂಗಳ ಬಳಿಕ ಎದ್ದೇಳುತ್ತದೆ ಆದರೆ ಜೇನು ನೊಣ ತುಂಬಾ ಕ್ರಿಯಾಶೀಲ ವಾಗಿರುತ್ತದೆ ಎಂದರು.

ಹುಸೇನ್ ಬೋಲ್ಟ್ ಕತೆ: ವಿಶ್ವದ ವೇಗದ ಆಟಗಾರ ಹುಸೇನ್ ಬೊಲ್ಟ್ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಅವನಿಗೆ ಊಟ ತಿಂಡಿ ಇರಲಿಲ್ಲ ಹಸಿವು ಆವರಿಸಿತ್ತು. ಆತ ಶಾಲೆಯಲ್ಲಿ ಮಂಕಾಗಿದ್ದ. ಶಿಕ್ಷಕರೊಬ್ಬರು ವಿಚಾರಿಸಿದಾಗ ವಿಷಯ ತಿಳಿದು ನಿನಗೆ ಆಹಾರದ ವ್ಯವಸ್ಥೆ ಮಾಡುತ್ತೇನೆ. ನಿನಗೆ ಕ್ರೀಡೆಯಲ್ಲಿ ಆಸಕ್ತಿ ಇರುವುದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೋ ಎಂದು ಹೇಳಿದಾಗ ಆತ ಓಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ, ಜಗತ್ತಿನ ವೇಗದ ಓಟಗಾರ ಬಿರುದನ್ನು ಪಡೆದುಕೊಂಡಿದ್ದಾರೆ ಸ್ಫೂರ್ತಿ ತುಂಬಿದರು.

ಗುಂಡ್ಲುಪೇಟೆ ಇನ್ಸ್‌ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮೂರು ವರ್ಷಗಳ ವಿದ್ಯಾಭ್ಯಾಸವನ್ನು ಮುಗಿಸಿದ್ದೀರಿ, ಮುಂದೆ ಏನು ಮಾಡುವುದು ಎಂಬುದು ಎಲ್ಲರಲ್ಲೂ ಪ್ರಶ್ನೆ ಕಾಡಿದೆ. ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಚಿಂತನೆ ನಡೆಸಿ, ಸಕಾರಾತ್ಮಕವಾಗಿ ಚಿಂತಿಸಿ. ನಿಮ್ಮ ತಂದೆ ತಾಯಿ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗಬೇಕೆಂದರೆ, ನೀವು ಉದ್ಯೋಗಗಳನ್ನು ಪಡೆದುಕೊಂಡು, ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದರು.

ಪ್ರಾಂಶುಪಾಲೆ ಡಾ.ಪಿ.ಮಹದೇವಮ್ಮ ಮಾತನಾಡಿ, ದೇಶದ ಸಂಸ್ಕೃತಿ ವಿಶ್ವದಲ್ಲೇ ಉಚ್ಛ್ರಾಯ ಸ್ಥಿತಿಯಲ್ಲಿದೆ. ಪ್ರತಿಯೊಬ್ಬರ ಜೀವನದಲ್ಲಿ ಸಂಸ್ಕೃತಿ ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೇ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಬಿ.ಪ್ರಭುಸ್ವಾಮಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮಲ್ಲುಸ್ವಾಮಿ ಎನ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ರಾಜಶೇಖರ್ ಹೆಚ್.ಎಂ,ಮೇಘನಾ ಎಸ್,ಕ್ರೀಡಾ ಕಾರ್ಯದರ್ಶಿ ಗವಿದರ್ಶನ್ ಬಿ.ಎಂ,ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.