ಸಂವಿಧಾನದ ಕಲಂ 371(ಜೆ) ರಕ್ಷಣೆಯೊಂದಿಗೆ ಅಭಿವೃದ್ಧಿ ಪಥದಲ್ಲಿರುವ ಕಲ್ಯಾಣ ಕರ್ನಾಟಕದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುದರ ಜೊತೆಗೆ ಅವುಗಳ ವೇಗ ಹೆಚ್ಚಿಸುವುದರ ಮೇಲೆ ನಿಗಾ ವಹಿಸಲು ಪ್ರತ್ಯೇಕ ಸಚಿವಾಲಯ ಆರಂಭಿಸಲು ಮಂಗಳವಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಒಂದು ವಾರದೊಳಗೆ ಸಿಬ್ಬಂದಿ ಸಹಿತ ಸಚಿವಾಲಯ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಂವಿಧಾನದ ಕಲಂ 371(ಜೆ) ರಕ್ಷಣೆಯೊಂದಿಗೆ ಅಭಿವೃದ್ಧಿ ಪಥದಲ್ಲಿರುವ ಕಲ್ಯಾಣ ಕರ್ನಾಟಕದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುದರ ಜೊತೆಗೆ ಅವುಗಳ ವೇಗ ಹೆಚ್ಚಿಸುವುದರ ಮೇಲೆ ನಿಗಾ ವಹಿಸಲು ಪ್ರತ್ಯೇಕ ಸಚಿವಾಲಯ ಆರಂಭಿಸಲು ಮಂಗಳವಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಒಂದು ವಾರದೊಳಗೆ ಸಿಬ್ಬಂದಿ ಸಹಿತ ಸಚಿವಾಲಯ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರಗಿಯ ಪರೇಡ್‌ ಮೇದಾನದಲ್ಲಿನ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಅನುಮೋದನೆಯಿಂದ ಬಹು ನಿರೀಕ್ಷಿತ ಬೇಡಿಕೆ ಕೈಗೂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ಎಲ್.ಕೆ.ಅಡ್ವಾಣಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಅಗತ್ಯವಿಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಹೀಗಿದ್ದಾಗ ಡಾ.ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಈ ಭಾಗಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದೆ. 371 (ಜೆ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ 41,103 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 32,985 ಕಾಮಗಾರಿಗಳು ಪೂರ್ಣಗೊಂಡಿವೆ. ಈ ಉದ್ದೇಶಕ್ಕಾಗಿ ರು. 24,780 ಕೋಟಿ ಅನುದಾನ ಒದಗಿಸಲಾಗಿದ್ದು, ಈ ಪೈಕಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ, 84,620 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.

ಕೆಕೆಆರ್‌ಡಿಬಿ ಕಾರ್ಯಕ್ರಮಗಳ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಶಿಕ್ಷಣ ಕ್ಷೇತ್ರದಲ್ಲಿ ‘ಅಕ್ಷರ ಆವಿಷ್ಕಾರ’ ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ 5,267 ಶಿಕ್ಷಕರನ್ನು ಒದಗಿಸುವುದರ ಜೊತೆಗೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸದಾಗಿ 350 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ನಿರ್ಮಿಲಾಗುವುದ ಎಂದರು.

ಆರೋಗ್ಯ ವಲಯದಲ್ಲಿ ಕ್ರಾಂತಿ ಮಾಡಲಾಗಿದ್ದು, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ನಿಮ್ಹಾನ್ಸ್ ಮಾದರಿಯ ಕೇಂದ್ರ, ಜಯದೇವ ಹೃದ್ರೋಗಗಳ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಆರಂಭಿಸಲಾಗಿದ್ದು, ಕಲಬುರಗಿ ನಗರವನ್ನು ರೀಜನಲ್ ಹೆಲ್ತ್ ಹಬ್ ಹಾಗೂ ಕ್ರೀಡಾ ನಗರಿಯನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದರು.

ಸಚಿವ ಭೈರತಿ ಸುರೇಶ್, ಡಿ.ಎಸ್.ಸುಧಾಕರ, ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾ, ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಶಿಲ್ ನಮೋಶಿ, ಜಗದೇವ ಗುತ್ತೇದಾರ್, ಪಾಲಿಕೆ ಮೇಯರ್ ವರ್ಷಾ ಜಾನೆ, ಉಪಮೇಯರ್ ತೃಪ್ತಿ ಶಿವಶರಣಪ್ಪ ಅಲ್ಲದ, ಜಿಡಿಎ ಅಧ್ಯಕ್ಷ ಮಝರ್ ಆಲಂಖಾನ್ ಇದ್ದರು.

ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ

ಪ್ರೊ. ನಂಜುಂಡಪ್ಪ ಸಮಿತಿಯ ವರದಿಯ ಅನುಷ್ಠಾನದಿಂದಾಗಿ ಹಿಂದುಳಿದ ತಾಲೂಕುಗಳಲ್ಲಿ ಆದ ಸುಧಾರಣೆ ಹಾಗೂ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರೊ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ. ವರದಿ ಬಳಿಕ ಅಗತ್ಯ ಕ್ರಮ.