ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಪಾಲಿಕೆ ಮಾಡಬೇಕೆಂಬುದು ನಮ್ಮ ಮೊದಲಿನಿಂದಲೂ ಇರುವ ಒತ್ತಾಯ ಎಂದು ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಪಾಲಿಕೆ ಮಾಡಬೇಕೆಂಬುದು ನಮ್ಮ ಮೊದಲಿನಿಂದಲೂ ಇರುವ ಒತ್ತಾಯ ಎಂದು ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.

ಕಿತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಆದರೆ, ಈ ಪ್ರಕ್ರಿಯೆಗೆ ಯಾರು ತಡೆಯೊಡ್ಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರತ್ಯೇಕ ಮಹಾನಗರ ಪಾಲಿಕೆ ನಮ್ಮ ದೃಢ ನಿಲುವು. ಈ ಬಗ್ಗೆ ರಾಜ್ಯಪಾಲರ ಬಳಿ ಅರ್ಜಿ ಇದೆ, ಆದರೆ ಅದನ್ನು ಯಾರು ಸ್ಥಗಿತಗೊಳಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ವಿರೋಧ ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದ ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾನೂ ಸ್ಟಾರ್ ಕ್ಯಾಂಪೇನರ್ ಆಗಿದ್ದು, ಸೋಮವಾರದಿಂದ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ. ದಾವಣಗೆರೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅಲ್ಲಿಯೂ ಪಕ್ಷಕ್ಕೆ ಜಯ ಸಿಗಲಿದೆ ಎಂದರು.

ಪದವೀಧರ ಕ್ಷೇತ್ರ ಟಿಕೆಟ್ ಹಂಚಿಕೆ ವಿಚಾರವಾಗಿ ಸಣ್ಣಪುಟ್ಟ ಅಸಮಾಧಾನಗಳಿರಬಹುದು. ಆದರೆ, ಪ್ರಸ್ತುತ ಲಿಂಬಿಕಾಯಿ ಅವರು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಹಾಗಾಗಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿರುವುದು ಸರಿಯಾದ ನಿರ್ಧಾರವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾದರೆ ನನಗೂ ಅವಕಾಶ ನೀಡಬಹುದು ಎಂಬ ಆಶಯವಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ನಾನು ಸಚಿವನಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಈ ಕುರಿತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ ಇದ್ದರು.