ಸಾರಾಂಶ
ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಮಂಗಳೂರಿಗೆ ಭೇಟಿ ನೀಡಿದ ಅವರನ್ನು ಕಾರ್ಯಕರ್ತರು, ಮುಖಂಡರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಗ್ಯಾರಂಟಿ ಯೋಜನೆ ಕಾಂಗ್ರೆಸ್ ಸರ್ಕಾರದ ಬದ್ಧತೆ. ಗ್ಯಾರಂಟಿ ನಿಲ್ಲಿಸೋದಾಗಿ ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಹೇಳ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಲ್ಲಿಸಲಾಗದು. ಅದರ ಬದಲಾಗಿ ಗ್ಯಾರಂಟಿ ಯೋಜನೆ ಸಿಗದವರನ್ನು ಹುಡುಕಿ ಕೊಡಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗಿದೆ, ಅದಕ್ಕಾಗಿ ಪ್ರತ್ಯೇಕ ಕಚೇರಿಯನ್ನೂ ತೆರೆಯಲಾಗಿದೆ ಎಂದು ವಿಧಾನ ಪರಿಷತ್ ನೂತನ ಸದಸ್ಯ, ಕೆಪಿಸಿಸಿ ರಾಜ್ಯ ಮುಖ್ಯ ವಕ್ತಾರ ಐವನ್ ಡಿಸೋಜ ಹೇಳಿದ್ದಾರೆ.ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಮಂಗಳೂರಿಗೆ ಭೇಟಿ ನೀಡಿದ ಅವರನ್ನು ಕಾರ್ಯಕರ್ತರು, ಮುಖಂಡರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸ್ವಾಗತಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆ ದೊರೆಯದೆ ಇರುವವರಿಗೆ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಗ್ಯಾರಂಟಿ ಕಚೇರಿ ತೆರೆಯಲಾಗಿದೆ. ಈ ಕಚೇರಿಯನ್ನು ಸಂಪರ್ಕಿಸಿದರೆ ಶೀಘ್ರದಲ್ಲಿ ಗ್ಯಾರಂಟಿ ಕೈಸೇರಲಿದೆ ಎಂದರು.ಜನರ ಮನ ಗೆಲ್ಲುವ ಗುರಿ:
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷೆ ಮಾಡುದಷ್ಟು ಸ್ಥಾನ ದೊರೆತಿಲ್ಲ. ನೈಋತ್ಯ ವಿಧಾನ ಪರಿಷತ್ ಚುನಾವಣೆಯಲ್ಲೂ ಸೋಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಈ ಹಿನ್ನೆಡೆಗೆ ಕಾರಣ ಹುಡುಕಿ ಜನರ ಮನ ಗೆಲ್ಲುವ ಕೆಲಸ ತಕ್ಷಣದಿಂದ ಮಾಡಲಿದ್ದೇವೆ. ಮುಂಬರುವ ಜಿ.ಪಂ., ತಾಪಂ ಹಾಗೂ ಮನಪಾ ಚುನಾವಣೆ ಗೆಲುವಿಗೆ ತುರ್ತು ಗಮನ ಹರಿಸಲಿದ್ದೇವೆ ಎಂದರು.‘ಜನರಿಂದ ಬಿಜೆಪಿ ತಿರಸ್ಕೃತ’
ಬಿಜೆಪಿ ಬಹುಮತಕ್ಕಿಂತ ಕಡಿಮೆ ಸ್ಥಾನ ಗಳಿಸಿದೆ. 13 ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲು ಸಾಧ್ಯವಾಗಿಲ್ಲ. ಸ್ವತಃ ನರೇಂದ್ರ ಮೋದಿ ಅವರ ಜಯದ ಅಂತರ 1.5 ಲಕ್ಷಕ್ಕೆ ಇಳಿಕೆಯಾಗಿದೆ. ಬಿಜೆಪಿಗೆ ಎನ್‌ಡಿಎ ನೇತೃತ್ವ ವಹಿಸುವ ನೈತಿಕತೆ ಉಳಿದಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಅಶ್ರಫ್, ಮನುರಾಜ್, ಶುಭೋದಯ ಆಳ್ವ, ಕೋಡಿಜಾಲ್ ಇಬ್ರಾಹಿಂ, ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಟಿ.ಎಂ. ಶಹೀದ್ ಮತ್ತಿತರರಿದ್ದರು.