ಸರಣಿ ಮನೆಗಳ್ಳತನ

| Published : Oct 03 2023, 06:01 PM IST

ಸಾರಾಂಶ

ಮನೆಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ತೊರೆಕಾಡನಹಳ್ಳಿ ಬೆಂಗಳೂರು ಜಲ ಮಂಡಳಿ ವಸತಿ ಗೃಹದಲ್ಲಿ ನಡೆದಿದೆ.
ಹಲಗೂರು: ಮನೆಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಸಮೀಪದ ತೊರೆಕಾಡನಹಳ್ಳಿ ಬೆಂಗಳೂರು ಜಲ ಮಂಡಳಿ ವಸತಿ ಗೃಹದಲ್ಲಿ ಭಾನುವಾರ ರಾತ್ರಿ ನಡೆದಿದೆ. ನೌಕರರಿಗೆ ರಜೆ ಇದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಸಮಯ ಗಮನಿಸಿರುವ ಚಲಾಕಿ ಕಳ್ಳರು ನೌಕರ ನಾಗೇಶ್ ಮತ್ತು ಚಿಕ್ಕಪುಟ್ಟಯ್ಯನವರ ಮನೆಯ ಬೀಗ ಒಡೆದು ಸುಮಾರು 2.6 ಲಕ್ಷ ಮೌಲ್ಯದ 60 ಗ್ರಾಂ‌ ಚಿನ್ನ ಮತ್ತು 23 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆ ತಿಳಿದು ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಬಿ.ಎಸ್.ಶ್ರೀಧರ್ ಮತ್ತು ಪಿಎಸ್ಐ ಬಿ.ಮಹೇಂದ್ರ ನೇತೃತ್ವದಲ್ಲಿ ಶ್ವಾನ ದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಾಲ್ವರು ಮುಸುಕುದಾರಿಗಳು ಅಲ್ಲಲ್ಲಿ ಅಡ್ಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.