ಸಾರಾಂಶ
ತಾಲೂಕಿನ ಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಮಾಯಸಂದ್ರ ಗ್ರಾಮದ ಜನತಾ ಕಾಲೋನಿಯ ನಿವಾಸಿ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಣ್ಣನವರ ಕುಟುಂಬದವರು ನೆಂಟರ ಮನೆಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ ಸುಮಾರು 1.60 ಲಕ್ಷ ರು. ನಗದು ಮತ್ತು 25 ಗ್ರಾಂ ಆಭರಣಗಳ ಕಳವು ಮಾಡಿ ಪರಾರಿಯಾಗಿದ್ದಾರೆ. ಆದರೆ ಮನೆಯಲ್ಲಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ದಬ್ಬೇಘಟ್ಟ ಹೋಬಳಿಯ ಮಾವಿನಕೆರೆ ಗ್ರಾಮದಲ್ಲಿ ೫ ಮನೆಗಳಿಗೆ ಕಳ್ಳರು ನುಗ್ಗಿದ್ದಾರೆ. ಮಾವಿನಕೆರೆಯ ಮಂಜುನಾಥ್ ಅವರ ಮನೆಯ ಪಕ್ಕದ ಶೆಡ್ಡಿನಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಜಯಶಂಕರ್ ಮನೆಗೆ ನುಗ್ಗಿರುವ ಕಳ್ಳರು ಸುಮಾರು ೮೦ ಸಾವಿರ ರು. ನಗದು ಕಳವು ಮಾಡಿದ್ದಾರೆ. ಮನೆಗೆ ಬೀಗ ಹಾಕಿದ್ದ ಅದೇ ಗ್ರಾಮದ ಈಶ್ವರ್ ಎಂಬುವವರ ಮನೆಯ ಬೀಗ ಮುರಿದು ಮನೆ ನುಗ್ಗಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದೆ. ಲಿಂಗಮ್ಮ ಎಂಬುವವರ ಮನೆಗೆ ನುಗ್ಗಿರುವ ಕಳ್ಳರು ಒಂದುವರೆ ಸಾವಿರ ರು. ಕದ್ದಿದ್ದಾರೆ. ನಂತರ ಬ್ಯಾಡರಹಳ್ಳಿಯ ರಾಜಣ್ಣ ಎಂಬುವವರಿಗೆ ಸೇರಿದ ಬೈಕ್ ಕದ್ದಿದ್ದರು. ಆದರೆ ಬೈಕ್‌ನಲ್ಲಿ ಪೆಟ್ರೋಲ್ ದಾರಿ ಮಧ್ಯೆ ಖಾಲಿಯಾದ ಕಾರಣ ಊರ ಹೊರಗಿನ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ನಂತರ ಅರಳಹಳ್ಳಿಯಲ್ಲಿ ಬೀಗ ಹಾಕಿದ್ದ ಮನೆಯ ಬೀಗ ಮುರಿದಿದ್ದಾರೆ. ಆದರೆ ಮನೆಗೆ ನುಗ್ಗಲು ಸಾಧ್ಯವಾಗಿಲ್ಲ. ಒಟ್ಟಾರೆ ಈ ಮೂರ್‍ನಾಲ್ಕು ಗ್ರಾಮಗಳಲ್ಲಿ ಬೀಗ ಹಾಕಲಾಗಿದ್ದ ಮನೆಗಳನ್ನೇ ಕಳ್ಳರು ಟಾರ್ಗೆಟ್ ಮಾಡಿದ್ದಾರೆ.ಈ ಕಳ್ಳತನ ಮಾಡಿರುವ ಖದೀಮರು ಕಪ್ಪು ಬಟ್ಟೆಯನ್ನು ಧರಿಸಿರುವುದು ಮತ್ತು ಮೂವರು ಕಳ್ಳತನ ಮಾಡಲು ಬಂದಿರುವುದು ಮಾಯಸಂದ್ರದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಮ್ಮ ಮನೆ ಕಳ್ಳತನ ಮಾಡಿರುವ ಸಂಬಂಧ ಯೋಧ ಶಿವಣ್ಣ ಪತ್ನಿ ಶಶಿಕಲಾ ತುರುವೇಕೆರೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾಗಿರುವ ಸ್ಥಳಗಳಿಗೆ ಸಿಪಿಐ ಲೋಹಿತ್, ಎಸ್‌ಐ ಸಂಗಮೇಶ್ ಮೇಟಿ ಭೇಟಿ ನೀಡಿದ್ದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದರು. ಪ್ರಕರಣ ದಾಖಲಾಗಿದೆ. ಈ ಘಟನೆಗಳಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಪೋಲಿಸರು ಕಳ್ಳರನ್ನು ಪತ್ತೆ ಹಚ್ಚಿ ಸಾರ್ವಜನಿಕರ ಆತಂಕವನ್ನು ದೂರಮಾಡಬೇಕೆಂದು ಮಾವಿನಕೆರೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.