ಸಾರಾಂಶ
ಬಾಳೆಹೊನ್ನೂರು, ಪಟ್ಟಣದಲ್ಲಿ ಡಿ.19ರಂದು ನಡೆದಿದ್ದ ಸರಣಿ ಕಳವು ಪ್ರಕರಣ ಹಾಗೂ ವಿವಿಧ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಗಳಿಗೆ ಬೇಕಾಗಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಾಳೆಹೊನ್ನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ರೂ.4.10 ಲಕ್ಷ ಮೌಲ್ಯದ ವಸ್ತುಗಳ ವಶ । ಬಾಳೆಹೊನ್ನೂರು ಪೊಲೀಸರ ಕಾರ್ಯಾಚರಣೆ । ಓರ್ವ ಆರೋಪಿ ನಾಪತ್ತೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದಲ್ಲಿ ಡಿ.19ರಂದು ನಡೆದಿದ್ದ ಸರಣಿ ಕಳವು ಪ್ರಕರಣ ಹಾಗೂ ವಿವಿಧ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಗಳಿಗೆ ಬೇಕಾಗಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಾಳೆಹೊನ್ನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಆರ್. ಕರುಣ ಅಲಿಯಾನ್ ಅರ್ಮನ್ ಮಾಲೀಕ್ (25) ಹಾಗೂ ಹೊಸದುರ್ಗದ ಹಸೈನ್ ಸಾಧಿಕ್ (22) ಬಂಧಿತ ಆರೋಪಿಗಳು. ಶಿವಮೊಗ್ಗ ನಗರದ ಜಾವಿದ್ ಖಾನ್ ಅಲಿಯಾಸ್ ಲುಕ್ಮನ್ ನಾಪತ್ತೆಯಾದ ಆರೋಪಿ.ಈ ಮೂವರು ಡಿ.19ರಂದು ಮುಂಜಾನೆ ಪಟ್ಟಣದ ಮುಖ್ಯರಸ್ತೆಯ ಪವನ್ ಪ್ರಾವಿಷನ್ ಸ್ಟೋರ್, ಎನ್.ಆರ್.ಪುರ ರಸ್ತೆಯ ಕಲ್ಮಕ್ಕಿ ವೈನ್ಸ್, ಪ್ರಭು ಪ್ರಾವಿಷನ್ ಸ್ಟೋರ್ ಹಾಗೂ ಬಾಳೆಹೊನ್ನೂರು ಕಾಫಿ ಲಿಂಕ್ಸ್ ಎಂಬ ಅಂಗಡಿಗಳ ಬಾಗಿಲು ಮುರಿದು ಒಳನುಗ್ಗಿ ನಗದು ಸೇರಿದಂತೆ ವಿವಿಧ ವಸ್ತುಗಳನ್ನು ಕಳವು ಮಾಡಿ ನಾಪತ್ತೆಯಾಗಿದ್ದರು.ಘಟನೆ ಕುರಿತು ಬಾಳೆಹೊನ್ನೂರು ವಿವೇಕನಗರದ ಮುಬಾರಕ್ ಹುಸೇನ್ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ವಿವಿಧ ಮಾಹಿತಿ ಕಲೆ ಹಾಕಿದ ಪೊಲೀಸರು ಗುರುವಾರ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಇಬ್ಬರು ಆರೋಪಿ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾರೆ. ಓರ್ವ ಆರೋಪಿ ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.ಮೂವರು ಸೇರಿ ಕಾಫಿ ಅಂಗಡಿಯಲ್ಲಿ ₹20 ಸಾವಿರ ನಗದು, ಎರಡು ವಾಚುಗಳು, ವೈನ್ಸ್ ಸ್ಟೋರಿನಲ್ಲಿ ಮೂರು ಮದ್ಯದ ಬಾಟಲಿ ಹಾಗೂ ₹2 ಸಾವಿರ ನಗದು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಳ್ಳತನದ ವೇಳೆ ಅಂಗಡಿಗಳಲ್ಲಿದ್ದ ಸಿಸಿಟಿವಿ, ಡಿವಿಆರ್‌ಗಳನ್ನು ಸಹ ಹೊತ್ತೊಯ್ದಿದ್ದು ಅವುಗಳನ್ನು ಎನ್.ಆರ್.ಪುರ ಬಳಿ ಭದ್ರಾ ಹಿನ್ನೀರಿಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ.ಈ ಮೂವರು ಬಾಳೆಹೊನ್ನೂರು ಮಾತ್ರವಲ್ಲದೇ ಚಿತ್ರದುರ್ಗ, ಹೊಸದುರ್ಗ, ಸಾಗರ, ಉಡುಪಿ, ಅಜ್ಜಂಪುರ, ಕಡೂರು ಸೇರಿದಂತೆ ನೆರೆಯ ಆಂದ್ರಪ್ರದೇಶದಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹತ್ತಾರು ಪ್ರಕರಣಗಳು ಇವರ ಮೇಲೆ ದಾಖಲಾಗಿ ಪೊಲೀಸರಿಗೆ ಬೇಕಾಗಿದ್ದರು. ಆರೋಪಿಗಳಿಂದ ವಿವಿಧೆಡೆ ಕಳ್ಳತನ ಮಾಡಿದ್ದ ₹4.10 ಲಕ್ಷ ಮೌಲ್ಯದ ವಾಟರ್ ಹೀಟರ್, ಐರನ್ ಬಾಕ್ಸ್, ಇಂಡಕ್ಷನ್ ಸ್ಟೌವ್, ಹೋಮ್ ಥಿಯೇಟರ್, ಎಲ್‌ಇಡಿ ಟಿವಿ, ಕ್ಯಾಸಿಯೋ ವಾಚು, ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.ಬಾಳೆಹೊನ್ನೂರು ಪಿಎಸ್‌ಐ ರವೀಶ್ ನೇತೃತ್ವದಲ್ಲಿ ಸಿಬ್ಬಂದಿ ಕೆ.ಜೆ.ಶಂಕರ್, ಜಯರಾಮ, ಮಂಜುನಾಥ, ವಿನಾಯಕ, ಮನು, ಮಂಜುನಾಥ ಗುಗ್ಗರಿ, ಕಿರಣ್, ಭೀಮಸೇನಾ, ಚನ್ನಯ್ಯ, ಚಾಲಕ ಕಾರ್ತಿಕ್ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಆರೋಪಿಗಳನ್ನು ಶುಕ್ರವಾರ ಎನ್.ಆರ್.ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪಿಎಸ್‌ಐ ರವೀಶ್ ತಿಳಿಸಿದ್ದಾರೆ. ೨೭ಬಿಹೆಚ್‌ಆರ್ ೧: ಬಾಳೆಹೊನ್ನೂರು ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಕಳವು ಪ್ರಕರಣದ ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳೊಂದಿಗೆ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಮತ್ತು ಸಿಬ್ಬಂದಿಗಳು.೨೭ಬಿಹೆಚ್‌ಆರ್ ೨, ೩: ಆರೋಪಿಗಳು.