ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಕರು ಪ್ರತಿದಿನ ತಪ್ಪದೇ ಕರ್ತವ್ಯಕ್ಕೆ ಹಾಜರಾಗಬೇಕು. ಅನಧಿಕೃತವಾಗಿ ಗೈರು ಹಾಜರಾಗಿರುವುದು ಗಮನಕ್ಕೆ ಬಂದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಎಚ್ಚರಿಸಿದರು.ಮಧುಗಿರಿ ತಾಲೂಕು ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಿಂದು ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಶಾಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳಿದ್ದು, ಶಿಕ್ಷಕರು ಪ್ರತಿ ಮಗುವಿನ ಪಠ್ಯಾಭ್ಯಾಸದ ಮೇಲೆ ಗಮನ ನೀಡಬೇಕು. ಮಕ್ಕಳು ತರಗತಿಗೆ ಗೈರು ಹಾಜರಾದಲ್ಲಿ ಪೋಷಕರಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು. ನಂತರ ಮಕ್ಕಳ ಜೊತೆ ಸಂವಾದ ನಡೆಸಿದ ಅವರು, ಮಕ್ಕಳು ಪ್ರತಿ ದಿನ ಶಾಲೆಗೆ ಹಾಜರಾಗಿ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಕಲಿಯಬೇಕು ಎಂದರು. ಬಳಿಕ ಮಕ್ಕಳಿಗೆ ಮಗ್ಗಿ ಹಾಗೂ ಗಣಿತದ ಪಾಠವನ್ನು ಹೇಳಿಕೊಟ್ಟರು.ನಂತರ ಶಿಕ್ಷಕರು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲೆಯ ಎಸ್‌ಡಿಎಂಸಿ ಸದಸ್ಯರೊಂದಿಗೆ ಸಭೆ ನಡೆಸಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಬೇಕು. ಅವಶ್ಯಕತೆ ಬಿದ್ದರೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕು ಎಂದರು.ಈ ವೇಳೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಾರಾಯಣಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಯೋಜನಾಧಿಕಾರಿಗಳು, ಸಿಡಿಪಿಒ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು ಭಾಗಿಯಾಗಿದ್ದರು.ಇದಕ್ಕೂ ಮುನ್ನ ಮಧುಗಿರಿ ತಾಲ್ಲೂಕು ಹೊಸಕೆರೆ ಗ್ರಾಮ ಪಂಚಾಯತಿ ಗಿರಿಯಮ್ಮನ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದ ಜಿ.ಪ್ರಭು ಅವರು, ರೈತರು ಕಡ್ಡಾಯವಾಗಿ ತಾವು ಬೆಳೆದ ಬೆಳೆಯನ್ನು ವಿಮಾ ಸೌಲಭ್ಯಕ್ಕೊಳಪಡಿಸಬೇಕು. ಇದರಿಂದ ಪ್ರಕೃತಿ ವಿಕೋಪ, ಅತಿವೃಷ್ಠಿ ಮತ್ತಿತರ ಕಾರಣಗಳಿಂದ ಬೆಳೆ ಹಾನಿಯಾದಲ್ಲಿ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿತ್ತನೆ ಬೀಜದ ಗುಣಮಟ್ಟವನ್ನು ಪರಿಶೀಲಿಸಿದ ಅವರು ರೈತರ ಜಮೀನಿನಲ್ಲಿ ನಡೆಯುತ್ತಿದ್ದ ಬಿತ್ತನೆ ಕಾರ್ಯದಲ್ಲಿ ಪಾಲ್ಗೊಂಡು ಒಂದು ಸಾಲು ಬಿತ್ತನೆ ಮಾಡಿದರು.