ಮಾಗಡಿ: ಗ್ರಾಮೀಣ ಭಾಗದ ಮೂಲೆಮೂಲೆಯಲ್ಲೂ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುವ ಮೂಲಕ ವೈದ್ಯರು ಸೇವಾಭಾವ ಬೆಳೆಸಿಕೊಳ್ಳಬೇಕು ಎಂದು ವೈದ್ಯರಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಕರೆ ನೀಡಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಉಚಿತ ದಂತ ಮತ್ತು ಬಾಯಿ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕು. ಹಲ್ಲು, ಬಾಯಿ ಚೆನ್ನಾಗಿದ್ದರೆ ನೋಡಲು ಸುಂದರವಾಗಿ ಕಾಣುತ್ತಾರೆ. ಅವರ ಆರೋಗ್ಯವೂ ಚೆನ್ನಾಗಿರುತ್ತದೆ. ಹಲ್ಲುಗಳು ವಕ್ರವಕ್ರವಾಗಿದ್ದರೆ ಜೊಲ್ಲುಬಾಯಿ ಇವೆಲ್ಲವೂ ಅನಾರೋಗ್ಯದ ಲಕ್ಷಣಗಳು. ಎಚ್‌ಪಿವಿ. ಎಚ್‌ಐವಿ.ಹಾಗೂ ಕ್ಷಯ ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ರೋಗ ಗುಣಪಡಿಸಿಕೊಳ್ಳಬಹುದು ಎಂದು ಹೇಳಿದರು.
ಅನುವಂಶೀಯ ಕ್ಯಾನ್ಸರ್:ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ಥನ, ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದು ಅನುವಂಶೀಯವಾಗಿಯೂ ಬರುವ ಸಾಧ್ಯತೆಗಳಿದೆ. ಕ್ಯಾನ್ಸರ್ ಪೀಡತರು ಎಂಬ ಭಯ ಬೇಡ, ಹೇಳಿಕೊಳ್ಳಲು ಮುಜುಗರವೂ ಬೇಡ, ಮುಜುಗರದಿಂದ ಹೇಳದೆ ಇದ್ದರೆ ರೋಗ ಉಲ್ಬಣಗೊಂಡು ಪ್ರಾಣಕ್ಕೆ ಹಾನಿಯಾಗಲಿದೆ. ಆಶಾ ಕಾರ್ಯಕರ್ತೆರಿಂದ ಪ್ರತಿ ಮನೆಗಳ ಸರ್ವೇ ಮಾಡಿಸಿ, ಕ್ಯಾನ್ಸರ್ ಪೀಡಿತರನ್ನು ಪತ್ತೆ ಹಚ್ಚುವ ಕೆಲಸ ಮಾಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ಒಳಪಡಿಸಿದರೆ ಕ್ಯಾನ್ಸರ್ ರೋಗ ನಿವಾರಣೆಗೆ ಮಾಡಬಹುದು. ಮಂಜಾಗ್ರತೆಯಿಂದ ರೋಗ ಪತ್ತೆ ಹಚ್ಚಿದರೆ ರೋಗ ತಡೆಗಟ್ಟಬಹುದು. ಕಮ್ಯುನಿಟಿ ಮೆಡಿಸನ್ ವರ್ಕ ಮಾಡಬೇಕಿದೆ. ಇದಕ್ಕೆ ಬೇಕಾದ ವ್ಯಾಕ್ಸಿನ್‌ಗಳನ್ನು ರೋಗಿಗಳಿಗೆ ಕೊಡಬೇಕು. ಹೆಚ್ಚಿನ ವ್ಯಾಕ್ಸಿನ್ ಬೇಕಾದಲ್ಲಿ ನನ್ನ ಸ್ವಂತ ಹಣದಿಂದಲೇ ವ್ಯಾಕ್ಸಿನ್ ಕೊಡಿಸಲು ಆರ್ಥಿಕ ಸಹಕಾರ ನೀಡುತ್ತೇನೆ. ನಮ್ಮ ಕ್ಷೇತ್ರದ ಜನರ ಆರೋಗ್ಯ ನನಗೆ ಮುಖ್ಯ. ಈ ನಿಟ್ಟಿನಲ್ಲಿ ನಾವೂ ನೀವು ಎಲ್ಲರೂ ಸೇರಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಕೈಜೋಡಿಸೋಣ ಎಂದು ಶಾಸಕರು ಕರೆ ನೀಡಿದರು.
ಇದೇ ವೇಳೆ ಟಿಬಿ ರೋಗಿಗಳಿಗೆ ಪೌಷ್ಟಿಕ ಆಹಾರದ ಪ್ಯಾಕ್‌ಗಳನ್ನು ವಿತರಿಸಲಾಯಿತು. ಸರ್ಕಾರಿ ಜಿಲ್ಲಾಸ್ಪತ್ರೆಯ ಡಿಎಚ್‌ಒ ಡಾ.ಪದ್ಮಾವತಿ, ಡಾ.ರಾಜು, ಡಾ.ಮುರಳಿ, ಡಾ.ಮಂಜುಳಾ, ಟಿಎಚ್‌ಓ ಡಾ.ರಾಮಚಂದ್ರ, ಮುಖ್ಯ ವೈದ್ಯಾಧಿಕಾರಿ ಹರ್ಷವರ್ಧನ್ ಆಸ್ಪತ್ರೆಯಲ್ಲಿನ ಸೇವೆ, ಶಿಬಿರಗಳು, ಚಿಕಿತ್ಸೆ, ತಡೆಗಟ್ಟುವಿಕೆ ಕುರಿತು ಮಾತನಾಡಿದರು. ಡಾ. ಬಾವ ಶಿವಕುಮಾರ್, ಹಿರಿಯ ನಿರೀಕ್ಷಣಾಧಿಕಾರಿ ಶಿವಸ್ವಾಮಿ, ಭಾಗ್ಯ, ಭರತ್, ಮಹಮದ್ ಇಸ್ಲಾಂ, ಮಾನಸ, ಗುಣಶೇಖರ್, ತುಕಾರಾಂ, ರಾಜೇಂದ್ರ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಫ್ಞನ್)
ಮಾಗಡಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಉಚಿತ ದಂತ ಮತ್ತು ಬಾಯಿ ತಪಾಸಣಾ ಶಿಬಿರದಲ್ಲಿ ಆರೋಗ್ಯ ಸಹಾಯಕಿಯರಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಉಚಿತ ಎಲೆಟ್ರಿಕ್ ದ್ವಿಚಕ್ರವಾಹನಗಳನ್ನು ವಿತರಿಸಿದರು.