ಹೆತ್ತ ತಾಯಿ, ಹೊತ್ತ ಭೂಮಿ, ಮಾತೃಭಾಷೆ ಸೇವೆ ಸಲ್ಲಿಸಿ: ಚಂದ್ರಕಲಾ

| Published : May 05 2024, 02:01 AM IST

ಸಾರಾಂಶ

ಕೊಪ್ಪ, ಸಾಮರಸ್ಯ ಮೂಡಿಸುವ, ಸಮಾಜದ ಸರ್ವಹಿತ ಕಾಪಾಡುವ ಶಕ್ತಿ ಸ್ವಹಿತದಿಂದ ಕೂಡಿದೆ. ಇವು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಾಗಿವೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರದಿಂದ ಗ್ರಾಮೀಣ ಭಾಗದ ಮನೆಯಂಗಳಕ್ಕೂ ಹೋಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ ಹೇಳಿದರು.

ಕಸಾಪ ನಗರ ಘಟಕದಿಂ ತನೂಡಿ ಬಾಲರಾಜ ಗೌಡರ ಮನೆಯಂಗಳದಲ್ಲಿ ಬೇವು-ಬೆಲ್ಲ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಾಮರಸ್ಯ ಮೂಡಿಸುವ, ಸಮಾಜದ ಸರ್ವಹಿತ ಕಾಪಾಡುವ ಶಕ್ತಿ ಸ್ವಹಿತದಿಂದ ಕೂಡಿದೆ. ಇವು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಾಗಿವೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರದಿಂದ ಗ್ರಾಮೀಣ ಭಾಗದ ಮನೆಯಂಗಳಕ್ಕೂ ಹೋಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ ಹೇಳಿದರು.

ಕಸಾಪ ನಗರ ಘಟಕದಿಂದ ತನೂಡಿ ಬಾಲರಾಜ ಗೌಡರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಬೇವು-ಬೆಲ್ಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮನ್ನೆಲ್ಲ ಹೆತ್ತ ತಾಯಿ, ಹೊತ್ತ ಭೂಮಿ ತಾಯಿ, ಬದುಕಿಗೆ ಬೆಳಕು ಕೊಟ್ಟ ಮಾತೃಭಾಷೆ ಈ ಮೂವರು ತಾಯಂದಿರ ಸೇವೆಯನ್ನು ಸದಾ ಸರ್ವರು ಮಾಡಬೇಕು. ಬೃಹತ್ ಶಬ್ಧ ಭಂಡಾರ ಹೊಂದಿರುವ ಕನ್ನಡವನ್ನು ಓದುವ, ಓದಿಸುವ, ಪರಿಪಾಠ ನಮ್ಮೆಲ್ಲರದ್ದಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಸ್ಮಿನ್ ದಯಾಕರ್ ಮಾತನಾಡಿ ಕಷ್ಟಸುಖ, ಸಿಹಿಕಹಿ, ಸಮವೆಲ್ಲ ಬಾಳಿಗೆ ಎನ್ನುವ ತತ್ವಸಾರ ಬೇವು ಬೆಲ್ಲ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದಿದೆ. ಬಳಸಿದಷ್ಟು ಭಾಷೆ ಬೆಳೆಯುತ್ತದೆ. ಉಳಿಯುತ್ತದೆ. ಹೊಸಗನ್ನಡದೊಂದಿಗೆ ಹಳೆಗನ್ನಡದ ಪರಿಚಯವು ನಮಗಿರಬೇಕು. ಎಲ್ಲರೂ ಒಟ್ಟಾಗಿ ಕನ್ನಡ ನಾಡು ನುಡಿ ಸೇವೆ ಮಾಡೋಣ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅತಿಥಿಗಳಾದ ತನೂಡಿ ಬಾಲರಾಜ್ ಗೌಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮನೆಮನಗಳನ್ನು ಬೆಳಗುವ ಇಂತಹ ಕಾರ್ಯಕ್ರಮ ಎಲ್ಲೆಡೆ ನಡೆಯಲಿ ಎಂದರು. ಕೆ.ಎನ್.ಶಿವಾನಂದ್ ಮಾತನಾಡಿ ಕನ್ನಡಕ್ಕೊದಗಿದ ಸ್ಥಿತಿಗತಿಗಳನ್ನು ವಿವರಿಸಿ ಮಾತನಾಡುತ್ತಾ ಕನ್ನಡಿಗರಿಗೆ ಎಲ್ಲಾ ಕ್ಷೇತ್ರ ಗಳಲ್ಲೂ ಉನ್ನತ ಹುದ್ದೆ ದೊರೆಯುವಂತಾಗಬೇಕು. ಇದೀಗ ಕನ್ನಡಿಗರನ್ನು ೪ನೇ ಮತ್ತು ೫ನೇ ದರ್ಜೆಗಳಿಗೆ ತಳ್ಳುವ ಕ್ರಿಯೆ ಗಳು ನಡೆಯುತ್ತಿರುವುದು ಬೇಸರದ ಸಂಗತಿ. ಎಲ್ಲರೂ ಒಟ್ಟಾಗಿ ಇಂತಹ ವಿಚಾರಗಳನ್ನು ಪ್ರಶ್ನಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ನಾರಾಯಣ ಸೇವಿರೆ ಮಾತನಾಡಿ ಕನ್ನಡವನ್ನು ಬಳಸುತ್ತಾ ಕನ್ನಡ ಸಾಹಿತ್ಯವನ್ನು ಓದುತ್ತಾ ಕನ್ನಡದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಮೈತ್ರಾ ಗಣೇಶ್, ಕಸಾಪ ತಾಲೂಕು ಕಾರ್ಯದರ್ಶಿ ಗುರುಮೂರ್ತಿ, ಗಬ್ಬಾನೆ ದೇವಸ್ಥಾನದ ವ್ಯವಸ್ಥಾಪಕ ಕೇಶವಗೌಡ, ಬಹುಮಾನ ವಿತರಕರಾದ ಜಿ.ದಯಾಕರ್, ಕಸಾಪ ನಗರ ಘಟಕದ ಕಾರ್ಯದರ್ಶಿ ಪಿಂಕು ಸುಷ್ಮಾ, ಶೃತಿ ರೋಹಿತ್ ಮುಂತಾದವರಿದ್ದರು.