ಇನ್ನರ್‌ ವೀಲ್‌ ಕ್ಲಬ್‌ ಮೂಲಕ ನಿರ್ಗತಿಕರ ಸೇವೆ ಮಾಡಿ: ಸುಷ್ಮಾ

| Published : Jul 17 2024, 12:46 AM IST

ಇನ್ನರ್‌ ವೀಲ್‌ ಕ್ಲಬ್‌ ಮೂಲಕ ನಿರ್ಗತಿಕರ ಸೇವೆ ಮಾಡಿ: ಸುಷ್ಮಾ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನರ್ ವೀಲ್ ಕ್ಲಬ್ ಮೂಲಕ ನಿರ್ಗತಿಕರ, ಅಸಹಾಯಕರ ಸೇವೆಯನ್ನು ಮಾಡಬೇಕು.

ಕುಷ್ಟಗಿ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಇನ್ನರ್ ವೀಲ್ ಕ್ಲಬ್ ಮೂಲಕ ನಿರ್ಗತಿಕರ, ಅಸಹಾಯಕರ ಸೇವೆಯನ್ನು ಮಾಡಬೇಕು ಎಂದು ಡಿಸ್ಟ್ರಿಕ್ ಎಡಿಟರ್ ಸುಷ್ಮಾ ಪತಂಗೆ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕುಷ್ಟಗಿ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸಂಘಟನೆ ಎಂದರೆ ಅದು ಇನ್ನರ್ ವಿಲ್ ಕ್ಲಬ್ ಮಾತ್ರ. ಕುಷ್ಟಗಿ ವ್ಯಾಪ್ತಿಯಲ್ಲಿ ಬರುವಂತಹ ಅಸಹಾಯಕರು, ನಿರ್ಗತಿಕರನ್ನು ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸೇವೆಯನ್ನು ಮಾಡುವಂತಹ ಕಾರ್ಯ ಮಾಡಬೇಕು. ಇದರ ಜೊತೆಗೆ ಆರೋಗ್ಯ, ಶಿಕ್ಷಣ ಸೇರಿದಂತೆ ಸಾಮಾಜಿಕ ಕಾರ್ಯ ಮಾಡುವಂತಾಗಬೇಕು. ಎಲ್ಲ ಸದಸ್ಯರು ನೂತನವಾಗಿ ಆಯ್ಕೆಯಾದಂತಹ ಪದಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷೆ ವಂದನಾ ಗೋಗಿ ಮಾತನಾಡಿ, ನಮ್ಮ ಕ್ಲಬ್ ವತಿಯಿಂದ ಅನೇಕ ಸಾಮಾಜಿಕ ಕಾರ್ಯ ಮಾಡುವ ಗುರಿ ಹೊಂದಲಾಗಿದ್ದು, ಈ ಗುರಿಯನ್ನು ಸಾಧಿಸಲು ಎಲ್ಲ ಸದಸ್ಯರು ಕೈ ಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಿಕಟ ಪೂರ್ವ ಅಧ್ಯಕ್ಷೆ ಶಾರದಾ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಎರಡು ಬಾರಿ ಕ್ಲಬ್ ಅಧ್ಯಕ್ಷಳಾಗಿ ಸೇವೆ ಸಲ್ಲಿಸಿದ್ದು, ಮುಂಬರುವ ಅಧ್ಯಕ್ಷರಿಗೂ ಹಾಗೂ ಪದಾಧಿಕಾರಿಗಳಿಗೆ ಎಲ್ಲ ಸದಸ್ಯರು ಸಹಾಯ ಮತ್ತು ಸಹಕಾರ ಮಾಡಬೇಕು ಎಂದರು.

ಇದೇ ವೇಳೆ ಇಬ್ಬರು ಮಹಿಳೆಯರಿಗೆ ಗರ್ಭ ಕೊರಳಿನ ಕ್ಯಾನ್ಸರ್ ಲಸಿಕೆ ನೀಡಿ ಎಲ್ಲ ಸದಸ್ಯರಿಗೆ ಗರ್ಭ ಕೊರಳಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪಟ್ಟಣದ ವೈದ್ಯರಾದ ಡಾ. ಸುಶೀಲ್ ಕಾಕಂಡಕಿ, ಡಾ. ಸಂಗಮೇಶ ಪಾಟೀಲ, ಡಾ. ವೇದಾ ಪಾಟೀಲ್, ಡಾ. ಕುಮದಾ ಪಲ್ಲೇದ ಹಾಗೂ ಡಾ. ಪಾರ್ವತಿ ಪಲೊಟಿ ಅವರನ್ನು ಸನ್ಮಾನಿಸಲಾಯಿತು.

ಕ್ಲಬ್ ನೂತನ ಅಧ್ಯಕ್ಷರಾಗಿ ವಂದನಾ ಗೋಗಿ, ಕಾರ್ಯದರ್ಶಿಗಳಾಗಿ ಮೇಘಾ ದೇಸಾಯಿ, ಖಜಾಂಚಿಯಾಗಿ ಪ್ರಭಾವತಿ ಬಂಗಾರ ಶೆಟ್ಟರ್, ಐಎಸ್ಓಗಳಾಗಿ ಗೌರಮ್ಮ ಕುಡತೀನಿ, ಎಡಿಟರ್ ಆಗಿ ಕಾವೇರಿ ಕುಂದರಗಿ ಪದಗ್ರಹಣ ಮಾಡಿದರು. ಈ ಸಂದರ್ಭ ಇನ್ನರ್ ವೀಲ್ ಕ್ಲಬ್ ಸರ್ವ ಸದಸ್ಯರು ಇದ್ದರು.