ಗಣತಿ ಕಾರ್ಯಕ್ಕೆ ಸರ್ವರ್ ಸಮಸ್ಯೆ

| Published : Sep 26 2025, 01:02 AM IST

ಸಾರಾಂಶ

ಇತ್ತ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಹೊಸ ಆ್ಯಪ್‌ ಡೌನಲೋಡ್ ಮಾಡಿಕೊಂಡು ಸರ್ವೇ ಮಾಡಲು ಮುಂದಾದರೂ ಸರ್ವರ್ ಸಮಸ್ಯೆ ಮುಂದುವರೆದಿದೆ

ಕನಕಗಿರಿ: ತಾಲೂಕು ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಗೆ ಸರ್ವರ್ ಸಮಸ್ಯೆ ಉಲ್ಬಣಿಸಿದ್ದು, ಗಣತಿದಾರರಿಗೆ ತಲೆನೋವು ತರಿಸಿದೆ.

ಹೌದು, ತಾಲೂಕಿನ ರಾಮದುರ್ಗಾ, ಕೆ. ಮಲ್ಲಾಪೂರ, ಹಿರೇಖೇಡ, ಹೊಸಗುಡ್ಡ, ಸಿರಿವಾರ, ಗೋಡಿನಾಳ, ಚಿರ್ಚನಗುಡ್ಡ, ಅಡವಿಬಾವಿ, ದೊಡ್ಡತಾಂಡಾ, ಚಿಕ್ಕತಂಡಾ, ಹುಲಸನಹಟ್ಟಿ, ಕನ್ನೇರಮಡು, ಸೋಮಸಾಗರ, ಬಸರಿಹಾಳ, ಗೌರಿಪುರ, ವರ್ನಖೇಡ, ಬೈಲಕ್ಕಂಪುರ, ವಡಕಿ, ಕಲಿಕೇರಿ, ಬೆನಕನಾಳ, ಬೊಮ್ಮಚಿಹಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಸರ್ವರ್ ಸಮಸ್ಯೆಯಿಂದ ಸಮೀಕ್ಷಾ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ.

ಸರ್ವರ್ ಸಮಸ್ಯೆ ಅರಿತುಕೊಂಡಿರುವ ಗಣತಿದಾರರು ಸೆ. 24ರ ಬುಧವಾರದಂದು ಬೆಳಗ್ಗೆ 6 ಗಂಟೆಯಿಂದಲೇ ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ.ಆದರೂ ಸರ್ವರ್ ಸಮಸ್ಯೆಯಾಗುತ್ತಿರುವುದು ಕಂಡು ಬರುತ್ತಿದೆ. ಇತ್ತ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಹೊಸ ಆ್ಯಪ್‌ ಡೌನಲೋಡ್ ಮಾಡಿಕೊಂಡು ಸರ್ವೇ ಮಾಡಲು ಮುಂದಾದರೂ ಸರ್ವರ್ ಸಮಸ್ಯೆ ಮುಂದುವರೆದಿದೆ. ಇದರಿಂದ ಗಣತಿದಾರರಿಗೆ ತೀವ್ರ ತಲೆನೋವು ತರಿಸಿದೆ. ಇನ್ನೂ ಕೆಲ ಗಣತಿದಾರರು ಸರ್ವರ್ ಸಮಸ್ಯೆ ಇರುವ ಕುರಿತು ತಾಂತ್ರಿಕ ತಂಡದ ವ್ಯಾಟ್ಸಾಪ್ ಗ್ರುಪ್‌ಗೆ ರವಾನಿಸಿದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಗಣತಿದಾರರು ಅಸಹಾಯಕತೆ ವ್ಯಕ್ತಪಡಿಸಿದರು.

ಸರ್ವರ್ ಸಮಸ್ಯೆ ಕುರಿತು ಗಣತಿದಾರರು ಗಮನಕ್ಕೆ ತಂದಿದ್ದಾರೆ. ತಾಂತ್ರಿಕ ಅನುಭವಿಗಳ ಜತೆ ಚರ್ಚಿಸಿ ಸರ್ವರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ನೆಟವರ್ಕ್ ಸಮಸ್ಯೆಯ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.

ಗಣತಿ ಕಾರ್ಯಕ್ಕೆ ಸರ್ವರ್ ಜತೆಗೆ ನೆಟವರ್ಕ್ ಸಮಸ್ಯೆ ಇದೆ.ಇದರಿಂದ ಸಮೀಕ್ಷೆಗೆ ತೊಂದರೆಯಾಗುತ್ತಿದೆ. ಕೆಲ ಗ್ರಾಮಗಳಲ್ಲಿ ನೆಟವರ್ಕ್ ಬರುತ್ತಿಲ್ಲ. ಇದರಿಂದ ಸಮೀಕ್ಷೆ ಮಾಡುವುದಾದರೂ ಹೇಗೆ? ಅಲ್ಲಿಯ ಸಿಬ್ಬಂದಿಯವರು ಏನು ಮಾಡಬೇಕು ? ತಿಳಿಯದಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಗಣತಿದಾರರು ತಿಳಿಸಿದ್ದಾರೆ.