ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಎಲ್ಲ ಧರ್ಮಗಳ ಸಾರ ಸೇವೆ ಕರುಣೆ ಕಾಯಕ ದಾಸೋಹವೇ ಆಗಿದೆ ಎಂದು ಹೊಸದುರ್ಗದ ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ಬೆಂಗಳೂರು ನಗರದ ಜೆ.ಬಿ.ಕಾವಲ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಡಿ.ಬನುಮಯ್ಯನವರ ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲ ಧರ್ಮಗಳು ಮಾನವೀಯತೆಯನ್ನು ಪರಸ್ಪರ ಪ್ರೀತಿಸುವುದನ್ನು ಸಾರಿವೆ. ಆದರೆ ಅದನ್ನು ಅರ್ಥೈಸಿಕೊಳ್ಳದ ಮಾನವ ಕೆಟ್ಟ ದಾರಿಯಲ್ಲಿ ಸಾಗಿದರೆ ಧರ್ಮ ಕಾರಣವಾಗುವುದಿಲ್ಲ, ಅರ್ಥೈಸಿಕೊಳ್ಳಲಾಗದ ಮಾನವ ಕಾರಣನಾಗುತ್ತಾನೆ. ಬುದ್ಧ, ಬಸವ, ಅಂಬೇಡ್ಕರ್, ಪೈಗಂಬರ್, ಯೇಸು, ಗುರುನಾನಕ್, ಗಾಂಧಿ ಎಲ್ಲರ ಚಿಂತನೆಗಳು ಸಮಾಜದ ಹಿತಕ್ಕಾಗಿ ದುಡಿದಿವೆ. ತನಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎಂಬ ಭಾವನೆಯನ್ನು ಹೊಂದಿದ್ದವು. ಆದರೆ ಕಲಿಯುಗದ ಮಾನವ ನನಗಾಗಿ ಸರ್ವಸ್ವ ಸಮಾಜಕ್ಕಾಗಿ ಸ್ವಲ್ಪ ಎಂಬ ಸಂಕುಚಿತ ಭಾವನೆಯಲ್ಲಿ ಸಿಲುಕಿದ್ದಾನೆ ಎಂದರು.ಸಮಾಜ ಸೇವೆ ಎಂಬುದು ಪವಿತ್ರವಾದ ಕಾರ್ಯ ಬಡವರ ನಿರ್ಗತಿಕರ ಅಬಲರ ಸೇವೆ ಸಲ್ಲಿಸಿದರೆ ದೇವರಿಗೆ ಸೇವೆ ಸಲ್ಲಿಸಿದಂತೆ ದೇವರು ಇರುವುದು ಚೈತನ್ಯ ಸ್ವರೂಪವಾಗಿ, ಜಡ ಸ್ವರೂಪವಾಗಿ ಅಲ್ಲ. ದೇವರನ್ನು ಹುಡುಕಬೇಕಾದರೆ ದೇವರ ದರ್ಶನವಾಗಬೇಕಾದರೆ ಸೇವೆ ತ್ಯಾಗ ಮಾಡಿ ನೋಡಿ ಪವಿತ್ರ ಭಾವನೆಯಲ್ಲಿ ಭಗವಂತನ ದಿವ್ಯ ದರ್ಶನವಾಗುತ್ತದೆ. ಡಿ.ಬನವಯ್ಯನವರು ಮೈಸೂರು ಪ್ರಾಂತ್ಯದಲ್ಲಿ ಮಹಾರಾಜರನ್ನು ಬಿಟ್ಟರೆ ಅತಿ ಹೆಚ್ಚು ಸಮಾಜಸೇವೆ ದಾನ ಮಾಡಿದಂತಹ ಮಹನೀಯರು. ಗಾಂಧೀಜಿ ಮೈಸೂರಿಗೆ ಭೇಟಿ ಕೊಟ್ಟಾಗ ಹರಿಜನ ನಿಧಿ ಸಂಗ್ರಹ ಸಮಿತಿಯ ಅಧ್ಯಕ್ಷರಾಗಿ ಮುಂಚೂಣಿಯಲ್ಲಿ ನಿಂತು ಸೇವೆಯನ್ನು ಸಲ್ಲಿಸಿ ದೀನ ದಲಿತರ ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ಸಹಾಯ ಜಮೀನಿನನ್ನೂ ಸಹ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಬನುಮಯ್ಯನವರಂತೆ ಶಾಂತವೀರ ಸ್ವಾಮೀಜಿಯವರು ಕ್ರಾಂತಿವೀರ ಶ್ರೀಗಳು. ಕುಂಚಿಟಿಗ ಸಮಾಜದ ಸಂಘಟನೆಗೆ. ಕುಲಶಾಸ್ತ್ರ ಅಧ್ಯಯನಕ್ಕೆ. ಕೇಂದ್ರ ಒಬಿಸಿ ಒಟ್ಟಿಗೆ ಸೇರಿಸಲು ಅವರ ನಿರಂತರ ಹೋರಾಟದ ಪ್ರಯತ್ನದ ಫಲವಾಗಿ ಕುಲಶಾಸ್ತ್ರ ಅಧ್ಯಯನವಾಗಿದೆ. ಒಬಿಸಿ ಸೇರಿಸಲು ಕಳೆದ 15 -20 ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ . ಬೆಂಗಳೂರು ನಗರದ ಬಡ ಕಾರ್ಮಿಕ ದೀನದಲಿತರ ಬಡ ಮಕ್ಕಳಿಗೆ ಶಿಕ್ಷಣ ಸಂಸ್ಥೆಯನ್ನು ತೆರೆದು ಶ್ರೀಮಠದಿಂದ ಅವರು ಪ್ರತಿ ವರ್ಷ ಉಚಿತ. ಪುಸ್ತಕ. ಬಟ್ಟೆ. ಪ್ರವಾಸ ಮಾಡಿಸುವ ಮೂಲಕ ಬಡವರ ಕಣ್ಮಣಿಯಾಗಿದ್ದಾರೆ. ಬಡವರ ಮೇಲಿರುವ ಅವರ ಕಾಳಜಿ ಇತರರಿಗೆ ಮಾದರಿ ಎಂದು ತಿಳಿಸಿದರುಈ ವೇಳೆ ಜೈ ಮಾರುತಿ ಟ್ರಸ್ಟ ನ ಅಧ್ಯಕ್ಷ ರಂಗನಾಥ್. ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಗಿರೀಶ್ ಕರೆಮಾದೇನಹಳ್ಳಿ. ಶಿಕ್ಷಕರಾದ ವಿಜಯಲಕ್ಷ್ಮಿ ಸುಧಾ ಪರಶಿವಮೂರ್ತಿ ರಶ್ಮಿ ಚೇತನ್ ಹಾಜರಿದ್ದರು.