ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆ ಮಹತ್ವದ್ದು: ಜಿನಿ ವಿಶ್ವನಾಥ್

| Published : Sep 30 2025, 12:00 AM IST

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆ ಮಹತ್ವದ್ದು: ಜಿನಿ ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಹರಾಜಪುರ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆಯೇ ನಿಜವಾದ ಸೇವೆ. ಇಂತಹ ಸೇವೆ ಮಾಡುವಾಗ ಮನಸ್ಸಿಗೆ ಸಂತೋಷ ನೀಡುತ್ತದೆ ಮತ್ತು ಪುಣ್ಯವೂ ನಮ್ಮನ್ನು ಕಾಪಾಡುತ್ತದೆ ಎಂದು ಜಿನಿ ವಿಶ್ವನಾಥ್ ಸೇವಾ ಕೇಂದ್ರದ ಅಧ್ಯಕ್ಷೆ ಜಿನಿ ವಿಶ್ವನಾಥ್ ಹೇಳಿದರು.

- ಜಿನಿ ವಿಶ್ವನಾಥ್ ಸೇವಾ ಕೇಂದ್ರದಿಂದ ಸರ್ಕಾರಿ ಆಸ್ಪತ್ರೆಗೆ ಎಮೆರ್ಜನ್ಸಿ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಹರಾಜಪುರ

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆಯೇ ನಿಜವಾದ ಸೇವೆ. ಇಂತಹ ಸೇವೆ ಮಾಡುವಾಗ ಮನಸ್ಸಿಗೆ ಸಂತೋಷ ನೀಡುತ್ತದೆ ಮತ್ತು ಪುಣ್ಯವೂ ನಮ್ಮನ್ನು ಕಾಪಾಡುತ್ತದೆ ಎಂದು ಜಿನಿ ವಿಶ್ವನಾಥ್ ಸೇವಾ ಕೇಂದ್ರದ ಅಧ್ಯಕ್ಷೆ ಜಿನಿ ವಿಶ್ವನಾಥ್ ಹೇಳಿದರು.ಸೋಮವಾರ ಸರ್ಕಾರಿ ಆಸ್ಪತ್ರೆಯಲ್ಲಿ ಜಿನಿ ವಿಶ್ವನಾಥ್ ಸೇವಾ ಕೇಂದ್ರದಿಂದ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷಾ ಸಾಧನ ಒಳಗೊಂಡ ಎಮರ್ಜೆನ್ಸಿ ಕಿಟ್‌ನ್ನು ವಿತರಣೆ ಮಾಡಿ ಮಾತನಾಡಿ, ಎನ್.ಆರ್.ಪುರದಲ್ಲಿ ಜಿನಿ ವಿಶ್ವನಾಥ್ ಸೇವಾ ಕೇಂದ್ರ ಸ್ಥಾಪನೆಯಾಗಿದೆ. ನಮ್ಮ ಹುಟ್ಟೂರಿಗೆ ಸಹಾಯ ಮಾಡುವ ಉದ್ದೇಶದಿಂದ ಜಿನಿ ವಿಶ್ವನಾಥ್ ಸೇವಾ ಕೇಂದ್ರ ದಿಂದ ಶೃಂಗೇರಿ ಕ್ಷೇತ್ರದಾದ್ಯಂತ ಜಾತಿ ಭೇದ ಭಾವವಿಲ್ಲದೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಅನೇಕ ಸೇವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನ ಸೂಸಲವಾನಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಅಂಧತೆಯಿಂದ ಬಾಧಿತರಾಗಿದ್ದು ಅವರ ಬೇಡಿಕೆಯಂತೆ ಇಂದು ಸೋಲಾರ್ ಹೀಟರ್‌ನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಮನೆ ಮೇಲ್ಛಾವಣಿ ದುರಸ್ತಿ ಕಾರ್ಯ ಮಾಡಿಸಲಾಗುವುದು ಎಂಬ ಭರವಸೆ ನೀಡಿದರು.

ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಓ.ನರಸಿಂಹಮೂರ್ತಿ ಹಾಗೂ ಅರವಳಿಕೆ ತಜ್ಞ ಡಾ.ವೀರಪ್ರಸಾದ್ ಅವರೊಂದಿಗೆ ಚರ್ಚಿಸಿ ಆಸ್ಪತ್ರೆಗೆ ಅಗತ್ಯ ಚಿಕಿತ್ಸಾ ಪರಿಕರ ನೀಡಲಾಗಿದೆ. ಮೂತ್ರಪಿಂಡ ರೋಗದಿಂದ ನರಳುತ್ತಿದ್ದ ರೋಗಿಗೆ ಕೈಲಾದ ಸಹಾಯಧನ ನೀಡಲಾಗಿದೆ ಎಂದರು.

ಜಿನಿ ಸೇವಾ ಕೇಂದ್ರದ ಮುಖ್ಯ ಉದ್ದೇಶವೇನೆಂದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುವುದು. ಅವರ ಆರೋಗ್ಯ ತಪಾಸಣೆ ಹಾಗೂ ಶಿಕ್ಷಣಕ್ಕೆ ಬೇಕಾದ ಪರಿಕರ ವಿತರಿಸುವುದು ಹಾಗೂ ಶಾಲೆಗೆ ಅಗತ್ಯ ನೆರವು ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದವರು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಅವರ ಚಿಕಿತ್ಸೆಗೆ ಅಗತ್ಯ ನೆರವು ನೀಡುತ್ತೇವೆ. ಶಿಕ್ಷಣ ಪಡೆದ ಹೊಂದಿದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಿ.ಎಸ್ಸಿ ನರ್ಸಿಂಗ್ ಪಡೆದವರಿಗೆ ಉದ್ಯೋಗ ಒದಗಿಸಲು ಪ್ರಯತ್ನ ಮಾಡಲಾಗುತ್ತದೆ. ಹಿಂದಳಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅರ್ಹತೆ ಆಧಾರದ ಮೇಲೆ ಆರ್ಥಿಕ ನಿರ್ವಹಣೆ ನೀಡುವುದು ಎಂದರು.

ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಆರೋಗ್ಯ ಸೇವಾ ಉಪಕರಣಗಳನ್ನು ಹಂಚುವುದು, ಅಂಗವಿಕಲರಿಗೆ ವೀಲ್ ಚೇರ್ ಮುಂತಾದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗುರಿ ಹೊಂದಿದ ಕಾರ್ಯಕ್ರಮವನ್ನು ಜಿನಿ ವಿಶ್ವನಾಥ ಸೇವಾ ಕೇಂದ್ರದಿಂದ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನರಸಿಂಹಮೂರ್ತಿ, ಡಾ,ವೀರಪ್ರಸಾದ್, ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆ್ಯಂಟೋನಿ, ಎಂ.ಪಿ.ಸನ್ನಿ, ವಿಜು ಮಾಕೋಡು, ರೀನಾ ಬೆನ್ನಿ,ಪ್ರೇಮಶ್ರೀನಿವಾಸ್, ಪಿ.ಸಿಜು,ಚೇತನ್, ಸಾಜು ಅಬ್ರಹಾಂ, ಸತೀಶ್ ಗದ್ದೇಮನೆ, ಸಿಜು, ಮನು ಮತ್ತಿತರರು ಇದ್ದರು.