ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಸೇವೆಯೇ ಸೇವಾದಳದ ಮೂಲ ಧ್ಯೇಯೊದ್ದೇಶ. ವರಿಷ್ಠರ ಸೂಚನೆಯಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಕಾಂಗ್ರೆಸ್ ಸೇವಾದಳದಿಂದ ಬೆಳಗಾವಿಯ ಕಾಂಗ್ರೆಸ್ ಮಹಾಧಿವೇಶನದ ಶತಮಾನೋತ್ಸವದ ಕಾರ್ಯಕ್ರಮವನ್ನು ಡಿ.26, 27 ಹಾಗೂ 28 ರಂದು ಬೆಳಗಾವಿಯ ಘಟಪ್ರಭಾದಲ್ಲಿ ಆಯೋಜಿಸಿ, ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿಯವರನ್ನು ಕರೆಸಬೇಕೆಂಬ ಒತ್ತಾಯ ಮಾಡಿದ್ದೇವೆ ಎಂದು ಸೇವಾದಳದ ರಾಜ್ಯಾಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸೇವಾದಳ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಸಹಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಘಟಪ್ರಭಾದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲಾಗಿದ್ದು, ಅದಕ್ಕೆ ಸೋನಿಯಾ ಗಾಂಧಿಯವರ ಹೆಸರು ನಾಮಕರಣ ಮಾಡಲು ತಿರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ 2 ಸಾವಿರ ಮಹಿಳೆಯರು, 8 ಸಾವಿರ ಪುರುಷರು ಸೇರಿ 10 ಸಾವಿರ ಸೇವಾದಳ ಕಾರ್ಯಕರ್ತರನ್ನು ಸೇರಿಸುವ ಗುರಿಯಿದೆ ಎಂಬುದಾಗಿ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇಯಾದ 140 ವರ್ಷಗಳ ಇತಿಹಾಸವಿದೆ. ಕಾಂಗ್ರೆಸ್ ಬಹಳಷ್ಟು ಸಂಘಟನೆ, ಜನಪರ ಕಾರ್ಯಕ್ರಮಗಳನ್ನು ದೇಶದ ಜನತೆಗೆ ಕೊಡುಗೆಯಾಗಿ ನೀಡಿದೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಇನ್ನಷ್ಟು ಪ್ರಬಲವಾಗಿ ಸಂಘಟಿಸಲು ಕಾರ್ಯಕರ್ತರಿಗೆ ತರಬೇತಿ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ವಿಜಯಪುರ ಜಿಲ್ಲೆಯಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪಕ್ಷ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ, ಪಕ್ಷಕ್ಕಾಗಿ ನಾವೇನು ಮಾಡಿದ್ದೇನೆ ಎಂಬ ಪರಿಕಲ್ಪನೆ ಇದ್ದಾಗ ಮಾತ್ರ ಪಕ್ಷದ ಪರಿಪೂರ್ಣ ಕಾರ್ಯಕರ್ತರಾಗಲು ಸಾಧ್ಯ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಮಹಾತ್ಮ ಗಾಂಧಿಜಿ ಸ್ನೇಹಿತರಾದ ಹರ್ಡೆಕರ್ ಮಂಜಪ್ಪನವರು ಗಾಂಧಿಜಿ ಅವರ ವಿಚಾರಧಾರೆಗಳನ್ನು ಜಗತ್ತಿಗೆ ಪಸರಿಸಲು ಸ್ವಾತಂತ್ರ್ಯ ಪೂರ್ವದಲ್ಲೇ 1923ರಲ್ಲಿ ಹಿಂದೂಸ್ಥಾನಿ ದಳ (ಈಗಿನ ಕಾಂಗ್ರೆಸ್ ಸೇವಾದಳ) ಸ್ಥಾಪಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರೆಲ್ಲರೂ ಕಾಂಗ್ರೆಸ್‌ನಿಂದಲೇ ಬಂದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಹೆಡಗೇವಾರ್ ಅವರು 1931ರಲ್ಲಿ ಈ ಸೇವಾದಳದ ಸದಸ್ಯರಾಗಿದ್ದರು. ಹೆಡಗೇವಾರ್ ಅವರಿಗೆ ಆರ್‌ಎಸ್ಎಸ್ ಸ್ಥಾಪಿಸಲು ಪ್ರೇರಣೆಯಾಗಿದ್ದು ಭಾರತೀಯ ಸೇವಾದಳ ಎಂದು ತಿಳಿಸಿದರು.ಇದೇ ವೇಳೆ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭೆಯಲ್ಲಿ ಕಾಂಗ್ರೆಸ್ ಸೇವಾದಳದ ಪ್ರಮುಖರಾದ ತುಳಸಿಗಿರೀಶ, ಗಿರೀಜಾ ಹೂಗಾರ, ರಮೇಶ, ಕಲ್ಪನಾ ಜೋಶಿ, ಗಂಗಾಧರ ಸಂಬಣ್ಣಿ, ಎಸ್.ಎಂ.ಪಾಟೀಲ ಗಣಿಹಾರ, ಕನ್ನಾನ್ ಮುಶ್ರೀಫ್, ವಿದ್ಯಾರಾಣಿ ತುಂಗಳ, ವಸಂತ ಹೊನಮೊಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.