ಕನಕಾಚಲಪತಿ ದೇವಸ್ಥಾನದಲ್ಲಿ ವಿಜೃಂಭಣೆಯ ಕಾರ್ತಿಕೋತ್ಸವ

| Published : Dec 03 2024, 12:32 AM IST

ಸಾರಾಂಶ

ಇಲ್ಲಿನ ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಛಟ್ಟಿ ಅಮವಾಸ್ಯೆ ನಿಮಿತ್ತ ಸಾವಿರಾರು ಭಕ್ತರಿಂದ ಕಾರ್ತಿಕೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ಇಲ್ಲಿನ ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಛಟ್ಟಿ ಅಮವಾಸ್ಯೆ ನಿಮಿತ್ತ ಸಾವಿರಾರು ಭಕ್ತರಿಂದ ಕಾರ್ತಿಕೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಅಮವಾಸ್ಯೆ ನಿಮಿತ್ತ ಕನಕಾಚಲ ಹಾಗೂ ಲಕ್ಷ್ಮೀದೇವಿಗೆ ವಿಶೇಷ ಪೂಜೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ದೇವಸ್ಥಾನದಲ್ಲಿ ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಂತರ ದೀಪೋತ್ಸವ ಕಾರ್ಯಕ್ರಮ ಆರಂಭಗೊಂಡಿತು. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹಣತೆಗಳನ್ನಿಟ್ಟಿದ್ದ ಭಕ್ತರು ತುಪ್ಪ, ಬತ್ತಿಯನ್ನು ಹಾಕಿ ದೀಪ ಬೆಳಗಿಸಿದರು.

ಕನಕಾಚಲ, ಲಕ್ಷ್ಮೀ, ಸ್ವಸ್ಥಿಕ್, ಓಂ, ಕನಕಗಿರಿ, ಕೊಪ್ಪಳ, ಭಾರತ, ಕರ್ನಾಟಕ, ಎನ್ನುವ ದೀಪದ ಆಕೃತಿಗಳು ನೆರದಿದ್ದವರನ್ನು ಆಕರ್ಷಿಸಿದವು.

ದೇವಸ್ಥಾನದ ವತಿಯಿಂದ ದೇಗುಲದ ಗೋಪುರಗಳಿಗೆ ವಿದ್ಯುತ್, ತಳಿರು, ತೋರಣಗಳಿಂದ ಅಲಂಕರಿಸಿದ್ದರು. ನೆರೆಯ ಜಿಲ್ಲೆ ಹಾಗೂ ರಾಜ್ಯದ ನೂರಾರು ಭಕ್ತರು ವಿಶಿಷ್ಟವಾಗಿ ನಡೆಯುವ ಕಾರ್ತಿಕೋತ್ಸವದಲ್ಲಿ ಭಾಗಿಯಾಗಿ ದೀಪ ಹಚ್ಚಿದರು.

ವಿವಿಧೆಡೆ:ಭಾನುವಾರ ರಾತ್ರಿ ಐತಿಹಾಸಿಕ ತೊಂಡಿತೇವರಪ್ಪ, ಪ್ರತಾಪರಾಯ, ಸಂಜೀವಮೂರ್ತಿ, ಸಚ್ಚಿದಾನಂದ ಅವಧೂತಮಠ, ಪೇಟೆ ಬಸವೇಶ್ವರ, ತೇರಿನ ಹನುಮಪ್ಪ, ಆನೆಗೊಂದಿ ಅಗಸಿ ಆಂಜನೇಯಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೀಪ ಹಚ್ಚಿ ಸಂಭ್ರಮಿಸಿದರು.

ಕುಮ್ಮಟದುರ್ಗದಲ್ಲಿ ಕಾರ್ತಿಕ ದೀಪೋತ್ಸವ:

ಗಂಗಾವತಿ ಸಮೀಪದ ಕುಮ್ಮಟದುರ್ಗದ ಕುಮಾರರಾಮ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ವಿಶೇಷ ಪೂಜೆ ಜರುಗಿತು. ಈ ಸಂದರ್ಭ ಕುಮಾರರಾಮನ ವಂಶಸ್ಥರಾದ ಎಚ್ .ರಾಜೇಶ್ ನಾಯಕ ದೊರೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಕುಮಾರರಾಮ ದೇವರಿಗೆ ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಲಾಗುತ್ತಿದೆ. ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.ಈ ವೇಳೆ ಗಂಡುಗಲಿ ಕುಮಾರರಾಮ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರನಾಯಕ, ಹತ್ತಿಮರದ ಹನುಮಂತಪ್ಪ, ದೇವರಾಜ ತಳವಾರ ಭಾಗವಹಿಸಿದ್ದರು.