ಸಮಾಜಮುಖಿ ಚಟುವಟಿಕೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರುದ್ರಾಕ್ಷ ಫೌಂಡೇಶನ್ ಆಶ್ರಯದಲ್ಲಿ ಆರಂಭಗೊಂಡಿರುವ ‘ಸಂಕಲ್ಪ’ ಸೇವಾ ಸಂಸ್ಥೆಗೆ ನಗರದ ವಾರ್ಡ್‌ ಸಂಖ್ಯೆ 8ರ ಸುಬ್ರಹ್ಮಣ್ಯನಗರದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ವಾರ್ಡ್‌ ಮಟ್ಟದಲ್ಲೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ, ಸಂಕಷ್ಟದ ಸಮಯದಲ್ಲಿ ನೆರವಾಗುವ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜೈಪ್ರಕಾಶ್ ಗುರೂಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕಲ್ಪ ಸಂಸ್ಥೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪ್ರಭಾವದಿಂದ ದೂರವಿದ್ದು, ಸಂಪೂರ್ಣವಾಗಿ ಸಾಮಾಜಿಕ ಸೇವೆಯನ್ನೇ ಗುರಿಯಾಗಿಸಿಕೊಂಡಿದೆ. ವಾರ್ಡ್‌ನ ನಿವಾಸಿಗಳ ಸುಖದುಃಖಗಳಲ್ಲಿ ಭಾಗಿಯಾಗುವುದು, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಯಾರಿಗೂ ತಮ್ಮವರಿಲ್ಲ ಎಂಬ ಭಾವನೆ ಮೂಡದಂತೆ ನೋಡಿಕೊಳ್ಳುವುದು ಸಂಕಲ್ಪ ಸಂಸ್ಥೆಯ ಉದ್ದೇಶವಾಗಿದೆ. ಮನೆಯ ಶುಭ ಸಮಾರಂಭಗಳಿಂದ ಹಿಡಿದು ಸಂಕಷ್ಟದ ಸಂದರ್ಭಗಳವರೆಗೆ ವಾರ್ಡ್‌ ನಿವಾಸಿಗಳೊಂದಿಗೆ ನಿಲ್ಲುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಯಾರಿಗೆ ಯಾರೂ ಇಲ್ಲವೋ ಅವರಿಗೆ ಸಂಕಲ್ಪ ಸಂಸ್ಥೆ ಇರುತ್ತದೆ ಎಂಬ ಧ್ಯೇಯವಾಕ್ಯದೊಂದಿಗೆ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.ವಾರ್ಡ್‌ನಲ್ಲಿರುವ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಕಲಾವಿದರು, ಕ್ರೀಡಾಪಟುಗಳು, ಶ್ರಮಜೀವಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಸಾರ್ವಜನಿಕವಾಗಿ ಸನ್ಮಾನಿಸಿ ಪ್ರೋತ್ಸಾಹಿಸುವ ಯೋಜನೆಯನ್ನೂ ಸಂಸ್ಥೆ ರೂಪಿಸಿದೆ. ಇದೇ ಮಾದರಿಯಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲೂ ಶೀಘ್ರದಲ್ಲೇ ಸಂಕಲ್ಪ ಸಂಸ್ಥೆಯ ಘಟಕಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಾರ್ಡ್‌ನ ಮುಖಂಡರಾದ ಪರಮೇಶ್, ಪ್ರಸನ್ನ ಕುಮಾರ್, ಮಹೇಂದ್ರ ಕುಮಾರ್‌, ತಮ್ಮಯ್ಯ ಶೆಟ್ಟರು, ಮೀನಾಕ್ಷ ಚಂದ್ರು, ಮಮತಾ, ಶೋಭಾ, ಅನಿತಾ, ಮೀನಾಕ್ಷಮ್ಮ, ರೇವತಿ, ವೀಣಾ ಸೇರಿದಂತೆ ವಾರ್ಡ್‌ನ ನಿವಾಸಿಗಳು ಭಾಗವಹಿಸಿದ್ದರು.