ಸಾರಾಂಶ
ಚನ್ನಪಟ್ಟಣ: ವಯೋವೃದ್ಧರು, ಬಡವರು, ನಿರ್ಗತಿಕರ ಸೇವೆ ಮಾಡುವುದರಿಂದ ಭಗವಂತನ ಅನುಗ್ರಹ, ಪುಣ್ಯ ಪ್ರಾಪ್ತವಾಗುತ್ತದೆ, ವೃದ್ಧರ ಸೇವೆ ದೇವರ ಸೇವೆಗೆ ಸಮ ಎಂದು ರೋಟರಿ ಚನ್ನಪಟ್ಟಣ ಶಾಖೆಯ ಅಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ವಯೋವೃದ್ಧರಿಗೆ ರೋಟರಿ ಚನ್ನಪಟ್ಟಣ ಶಾಖೆಯ ಅಧ್ಯಕ್ಷ ಪ್ರಸನ್ನ ಕುಮಾರ್ ರವರು ತಮ್ಮ ೧೫ ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಹಣ್ಣು ಹಂಪಲು, ದವಸ,ಧಾನ್ಯಗಳನ್ನು ವಿತರಣೆ ಮಾಡಿ ಮಾತನಾಡಿದರು.ಜೀವನದ ಸಂಧ್ಯಾಕಾಲದಲ್ಲಿ ವಯೋವೃದ್ಧ ತಂದೆ ತಾಯಿಗೆ ಸಿಗಬೇಕಾದ ಪ್ರೀತಿ ಮತ್ತು ಆರೈಕೆ ಇಲ್ಲವಾಗಿದೆ. ವಯೋವೃದ್ಧ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಬದುಕು ಯಾರಿಗೂ ಶಾಶ್ವತವಲ್ಲ. ಆದರೆ, ಬದುಕಿನಲ್ಲಿ ನಮ್ಮ ನಡೆ ಪ್ರಮುಖವಾಗುತ್ತದೆ. ಸಾಕಿ ಬೆಳೆಸಿದ ತಂದೆ ತಾಯಿಯನ್ನು ಮಕ್ಕಳು ಚನ್ನಾಗಿ ನೋಡಿಕೊಳ್ಳಬೇಕು ಎಂದರಲ್ಲದೆ ವೃದ್ಧಾಶ್ರಮಗಳಲ್ಲಿ ಜೀವನದ ಸಂಧ್ಯಾಕಾಲ ಕಳೆಯುತ್ತಿರುವ ಹಿರಿಯ ನಾಗರಿಕರಿಗೆ ನಮ್ಮ ರೋಟರಿ ವತಿಯಿಂದ ಅಗತ್ಯ ನೆರವು ಸಹಾಯ ಒದಗಿಸಲಾಗುವುದು ಎಂದು ತಿಳಿಸಿದರು.
ಅಪರ್ಣ ಜ್ಯುವೆಲರ್ಸ್ ಮಾಲೀಕ ರೋ. ವೆಂಕಟೇಶ್ ಮಾತನಾಡಿ, ನಾವೇನು ಗಳಿಸಿದ್ದೇವೋ ಅದರಲ್ಲಿ ಒಂದು ಭಾಗವನ್ನು ನೊಂದವರಿಗೆ ನೀಡಿದಾಗ ಮಾತ್ರ ಈ ಜೀವನ ಸಾರ್ಥಕವಾಗುತ್ತದೆ, ಪರರ ಹಿತಕ್ಕಾಗಿ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ರೋಟರಿ ಸದಸ್ಯರೆಲ್ಲರೂ ಒಟ್ಟಾಗಿ ಬಂದು ವೃದ್ರಾಶ್ರಮದ ಹಿರಿಯ ಜೀವಗಳಿಗೆ ಭಾವನೆಗಳನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.ರೋ. ರಮೇಶ್ ಕುಮಾರ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವಾಗಿ ವೃದ್ಧಾಶ್ರಮಗಳು ತಲೆ ಎತ್ತಿವೆ. ಕ್ಷುಲ್ಲಕ ಕಾರಣಗಳಿಗಾಗಿ ಹಿರಿಯ ನಾಗರಿಕರಿಗೆ ಪ್ರೀತಿ, ಸಹಾನುಭೂತಿ ಸಿಗುತ್ತಿಲ್ಲ. ಹಿರಿಯರೊಂದಿಗೆ ಪ್ರೀತಿ, ವಿಶ್ವಾಸ ಬೆಳೆಸುವ ಕಾರ್ಯವನ್ನು ಕಿರಿಯರು ಮಾಡಬೇಕಿದೆ ಎಂದರು.
ಈ ವೇಳೆ ವೃದ್ಧಾಶ್ರಮದ ಸಂಸ್ಥಾಪಕ ಹರೀಶ್ ಹೆಗಡೆ, ಶಿಕ್ಷಣ ಸಂಯೋಜಕ ರೋ. ಯೋಗೇಶ್ ಚಕ್ಕೆರೆ, ರೋಟರಿ ಕಾರ್ಯದರ್ಶಿ ವಿನಯ್ ಕುಮಾರ್, ಪದಾಧಿಕಾರಿಗಳಾದ ಮಹೇಶ್, ಎಚ್. ಲೋಕೇಶ್, ಡಾ. ಶ್ರೇಯಸ್, ಕಿರಣ್ ಕುಮಾರ್, ಲೋಕೇಶ್, ವಿಜಯ್ ರಾಂಪುರ ಮೊದಲಾದವರು ಉಪಸ್ಥಿತರಿದ್ದರು. ರೋ. ಲೋಕೇಶ್ ಹಾಗೂ ರಮೇಶ್ ಕುಮಾರ್ ರವರು ವೃದ್ಧಾಶ್ರಮದ ಹಿರಿಯರಿಗಾಗಿ ಔಷಧ ಖರೀದಿಗಾಗಿ ದೇಣಿಗೆ ನೀಡಿದರು.ಪೊಟೋ೧ಸಿಪಿಟಿ೧: ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ವಯೋವೃದ್ಧರಿಗೆ ಹಣ್ಣು ಹಂಪಲು, ದವಸ, ಧಾನ್ಯಗಳನ್ನು ವಿತರಿಸಲಾಯಿತು.