ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೆಪದಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಂಗರಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಉಳಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭವಾರ್ತೆ ಹಾಸನ
ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೆಪದಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಂಗರಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಉಳಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚೈತ್ರ ಉದ್ದೇಶಿಸಿ ಮಾತನಾಡಿ, ನಿಟ್ಟೂರಿನಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಸ್ಥಾಪಿಸುವ ನೆಪದಲ್ಲಿ ಸುತ್ತಮುತ್ತಲ ೫ ರಿಂದ ೬ ಕಿಲೋಮೀಟರ್ ವ್ಯಾಪ್ತಿಯ ೧೨ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ. ಹಂಗರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೨೫ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು, ಈ ೧೨ ಶಾಲೆಗಳ ಪೈಕಿ ಅತಿ ಹೆಚ್ಚು ಮಕ್ಕಳಿರುವ ಶಾಲೆಯೇ ಇದಾಗಿದೆ. ಇಂತಹ ಶಾಲೆಯನ್ನು ಮುಚ್ಚುವುದರಿಂದ ಗ್ರಾಮೀಣ ಮಕ್ಕಳಿಗೆ ತೀವ್ರ ಅನ್ಯಾಯವಾಗಲಿದೆ ಎಂದರು.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಮಾತನಾಡಿ, ಸರ್ಕಾರಿ ಶಾಲೆಗೆ ಬೇಕಾಗಿರುವುದು ಒಳ್ಳೆಯ ಶಿಕ್ಷಕರು, ಮಕ್ಕಳಿಗೆ ಸರಿಯಾದ ಜ್ಞಾನ, ನೀತಿ, ಮೌಲ್ಯಗಳನ್ನು ಕಲಿಸುವ ವಾತಾವರಣ ಹಾಗೂ ಮೂಲಸೌಕರ್ಯಗಳಷ್ಟೇ. ಶಿಕ್ಷಣ ಸಚಿವರಾಗಲಿ, ಮುಖ್ಯಮಂತ್ರಿಯಾಗಲಿ, ಯಾರೇ ಆಗಲಿ, ಯಾವುದೇ ಕಾರಣಕ್ಕೂ ನಮ್ಮ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಸರ್ಕಾರಿ ಶಾಲೆ ವಿಲೀನಗೊಳಿಸುವ ನಿರ್ಧಾರಕ್ಕೆ ನಮ್ಮ ಹಳ್ಳಿಯ ಸಂಪೂರ್ಣ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥರಾದ ಲೋಕೇಶ್ ನಾಯಕ್ ಮಾತನಾಡಿ, ನಮ್ಮ ಹಳ್ಳಿಯ ಜನ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಎದ್ದು ಹಾಲು ಕರೆದೊಯ್ದು, ಕೂಲಿ ಹಾಗೂ ಹೊಲ ಕೆಲಸಕ್ಕೆ ಹೋಗುವ ಬಡ ಕಾರ್ಮಿಕರು. ಸರ್ಕಾರ ಬಸ್ ವ್ಯವಸ್ಥೆ ಕೊಡುತ್ತೇವೆ ಎಂದರೂ ಮಕ್ಕಳನ್ನು ಪ್ರತಿದಿನ ದೂರದ ಶಾಲೆಗೆ ಸಿದ್ಧಪಡಿಸಿ ಕಳಿಸಲು ಸಾಧ್ಯವಿಲ್ಲ. ೩ ಕಿಲೋಮೀಟರ್‌ಗೆ ಬಸ್ ಬಿಡುತ್ತೇವೆ ಎಂದು ಹೇಳಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಯಾಗಿಸಬೇಡಿ. ನಮಗೆ ಬಸ್ ಬೇಡ, ಬೇರೆ ಏನೂ ಬೇಡ. ನಮ್ಮೂರ ಶಾಲೆ ಮಾತ್ರ ಬೇಕು. ನಿಮ್ಮ ರಾಜಕಾರಣ ನಮಗೆ ಬೇಡ; ನಮ್ಮ ಮಕ್ಕಳು, ನಮ್ಮ ಶಾಲೆ, ನಮ್ಮ ಹಳ್ಳಿ ಅಷ್ಟೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಊರಿನ ಹಿರಿಯರು ಮಾತನಾಡಿ, ನಾವು ಗಾರೆ ಕೆಲಸ ಮಾಡಿ ಬದುಕಿದ ಜನ. ಶಾಲೆಗೆ ಬೀಗ ಹಾಕಲು ಬಿಡುವುದಿಲ್ಲ. ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ ಧಿಕ್ಕಾರ ಎಂದು ಘೋಷಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಕುಮಾರ್ ನಾಯಕ್, ಶೋಭಾಬಾಯಿ, ಪ್ರಜ್ವಲ್, ಗುರು ನಾಯಕ್, ಸುರೇಶ್ ನಾಯಕ್, ಸ್ವಾಮಿ ನಾಯಕ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.